ಬೀದರ್: ಅಪೌಷ್ಟಿಕತೆಯಿಂದಾಗಿ ದೇಹ ದೌರ್ಬಲ್ಯವಾಗುವುದಲ್ಲದೆ ಮಾನಸಿಕ ಬೆಳವಣಿಗೆ ಕುಂಠಿತಗೊಳ್ಳುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅನೀಲ ಚಿಂತಾಮಣಿ ತಿಳಿಸಿದರು.
ಜಿಲ್ಲಾ ವಾರ್ತಾ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಇಂದಿರಾಬಾಯಿ ಗುರುತ್ವ ಶೆಟಕಾರ್ ಪ್ರೌಢಶಾಲೆಯ ಸಂಯುಕ್ತಾಶ್ರಯದಲ್ಲಿ ಅಪೌಷ್ಟಿಕತೆ ನಿವಾರಣೆ ಕುರಿತು ಮಂಗಳವಾರ ಆಯೋಜಿಸಿದ್ದ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಸಮತೋಲನ ಆಹಾರ ಸೇವಿಸಿ ಸದೃಢರಾಗಿರುವಂತೆ ಸಲಹೆ ನೀಡಿದರು.
ಜಿಲ್ಲಾ ಆರೋಗ್ಯ ಉಪ ಶಿಕ್ಷಣಾಧಿಕಾರಿ ಸುಭಾಸ ಮುಧಾಳೆ ಅತಿಥಿ ಉಪನ್ಯಾಸ ನೀಡುತ್ತ, ಮಗು ಹುಟ್ಟಿದ ಅರ್ಧ ಗಂಟೆಯೊಳಗಾಗಿ ತಾಯಿಯ ಹಾಲು ಕುಡಿಸಬೇಕು. ಮೂಢನಂಬಿಕೆಗಳನ್ನು ಕೈಬಿಡಬೇಕು ಎಂದರು.
ಕ್ರೀಡೆಯಿಂದ ಆರೋಗ್ಯ ವೃದ್ಧಿ: ಇಲಾಖೆಯಿಂದ ಅಪೌಷ್ಟಿಕತೆ ಇರುವ ಮಕ್ಕಳನ್ನು ಗುರುತಿಸಿ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತಿದೆ ಎಂದ ಅವರು, ಊಟ ಮಾಟುವ ಪದ್ಧತಿಗಳು ಬದಲಾವಣೆ ಆಗಿದೆ. ಮಕ್ಕಳು ಆಟವಾಡುವುದರಿಂದ ಶರೀರದ ಅಂಗಾಂಗಳು ಬಲಿಷ್ಠಗೊಳ್ಳುವುದರ ಜೊತೆಗೆ ಬೌದ್ಧಿಕ ಬಲ ಹೆಚ್ಚಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಮುಖಂಡ ವಿರುಪಾಕ್ಷ ಗಾದಗಿ ಮಾತನಾಡಿ, ಮಕ್ಕಳು ಪಠ್ಯಪುಸ್ತಕಗಳ ಹುಳುವಾಗದೇ ಕ್ರೀಡೆಗಳಲ್ಲಿಯೂ ಆಸಕ್ತಿ ತೋರಬೇಕು. ಆರೋಗ್ಯ ಸಂಪತ್ತು ಎಲ್ಲ ಸಂಪತ್ತುಗಳಿಗಿಂತ ಶ್ರೇಷ್ಠ ಎಂದರು.
ರೋಗಕ್ಕೆ ಅವಕಾಶ ಕೊಡಬೇಡಿ: ಅಧ್ಯಕ್ಷತೆ ವಹಿಸಿದ್ದ ಮುಖ್ಯಗುರು ಲಕ್ಷ್ಮಣ ಪೂಜಾರಿ ಮಾತನಾಡಿ, ಆರೋಗ್ಯವಂತ ಮಕ್ಕಳು ದೇಶದ ಸಂಪತ್ತು. ರೋಗ ಬರುವುದಕಿಂತ ಮೊದಲು ರೋಗ ಬರದ ಹಾಗೆಯೇ ಸದೃಢರಾಗಿ ರೋಗದ ಬಾಗಿಲನ್ನು ಮುಚ್ಚಿಕೊಳ್ಳುವಂತೆ ಸಲಹೆ ನೀಡಿದರು. ವಾರ್ತಾ ಇಲಾಖೆಯ ಸಹಾಯಕ ಬಕ್ಕಪ್ಪ ಮೇಲ್ಕೇರಿ ಪ್ರಾಸ್ತಾವಿಕವಾಗಿ ಮಾತನಾಡಿದರೆ ಬಾಪೂಗೌಡ ಸ್ವಾಗತಿಸಿ ಕುಮಾರ ಸಿದ್ಧಾರೂಢ ನಿರೂಪಿಸಿದರೆ, ಅಶ್ವಿನಿ ವಂದಿಸಿದರು.