ರಾಯಚೂರು

ವಿಧಾನಸಭೆ ಚುನಾವಣೆಗೆ ಲೋಕಸತ್ತಾ ಸಜ್ಜು

ರಾಯಚೂರು: ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಗಳಲ್ಲಿ ಲೋಕಸತ್ತಾ ಪಕ್ಷವು ತನ್ನ ಅಭ್ಯರ್ಥಿಗಳನ್ನು ಎಲ್ಲ 224 ಕ್ಷೇತ್ರಗಳಲ್ಲಿ ಕಣಕ್ಕಿಳಿಸಲಿದ್ದು, ಪ್ರಾಮಾಣಿಕರು, ಸದುದ್ದೇಶದಿಂದ ಸ್ಪರ್ಧೆಗಿಳಿಯುವವರಿಗೆ ಪಕ್ಷಕ್ಕೆ ಆದ್ಯತೆ ನೀಡಲಿದೆ ಎಂದು ಪಕ್ಷದ ಮಾಧ್ಯಮ ಸಮನ್ವಯಕಾರ ಆನಂದ ಯಾದವಾಡ ತಿಳಿಸಿದರು.
ಅವರು ನಗರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರದಿಂದ ರಾಜಕೀಯ ಕ್ಷೇತ್ರ ಕಲುಷಿತಗೊಂಡಿದ್ದು, ಅದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಿದೆ. ಎಲ್ಲ ರಾಷ್ಟ್ರೀಯ ಪಕ್ಷಗಳಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿಲ್ಲ. ಆಯಾ ಪಕ್ಷದ ಅಧ್ಯಕ್ಷರನ್ನು ಪಕ್ಷಗಳ ಸದಸ್ಯರು ಆಯ್ಕೆ ಮಾಡದಿರುವುದು ಇದನ್ನು ಸಾಬೀತುಪಡಿಸುತ್ತದೆ ಎಂದು ಆರೋಪಿಸಿದರು.
ವೆಚ್ಚಗಳ ಕಡಿತ: ಲೋಕಸತ್ತಾ ಪಕ್ಷವು ಭ್ರಷ್ಟಾಚಾರದ ವಿರುದ್ಧ ಪಕ್ಷದ ನಾಯಕ ಜಯಪ್ರಕಾಶ್ ನಾರಾಯಣ ನೇತೃತ್ವದಲ್ಲಿ ನಿರಂತರ ಹೋರಾಟ ಮಾಡುತ್ತಿದೆ. ಸರ್ಕಾರದ ಮಟ್ಟದಲ್ಲಿ ಅನಗತ್ಯ ವೆಚ್ಚಗಳ ಕಡಿತ, ಸಚಿವ ಸಂಪುಟದ ಗಾತ್ರ ತಗ್ಗಿಸುವುದು ಸೇರಿದಂತೆ ವಿವಿಧ ರೀತಿಯ ಒತ್ತಾಯಗಳ ಮೂಲಕ ಹೋರಾಟ ನಡೆಸಿದ್ದು ಪಕ್ಷದ ಸಾಧನೆಯಾಗಿದೆ ಎಂದು ತಿಳಿಸಿದರು.
ಭ್ರಷ್ಟ, ಅಪ್ರಾಮಾಣಿಕ ರಾಜಕೀಯ ನಾಯಕರಿಂದ ಅರ್ಥವಿಲ್ಲದ ಮಸೂದೆಗಳು ಮಂಡನೆಯಾಗುತ್ತಿವೆ. ಅದರಿಂದಾಗಿ ದೇಶದ ಜನತೆಗೆ ಯಾವುದೇ ಪ್ರಯೋಜನವಾಗುತ್ತಿಲ್ಲ. ಈ ಸಮಸ್ಯೆ ಹೋಗಲಾಡಿಸಲು ಪ್ರಾಮಾಣಿಕರು, ದೇಶದ ಬಗ್ಗೆ ಕಾಳಜಿಯಿರುವವರು ಪಕ್ಷದ ಅಭ್ಯರ್ಥಿಗಳಾಗಲು ಅರ್ಹರಾಗುತ್ತಾರೆಂದು ಹೇಳಿದರು.
ರಾಜ್ಯಾದ್ಯಂತ ಪ್ರವಾಸ: 2009ರಲ್ಲಿ ಕರ್ನಾಟಕದಲ್ಲಿ ಆರಂಭಗೊಂಡ ಲೋಕಸತ್ತಾ ಪಕ್ಷವು ಬೆಂಗಳೂರಿಗೆ ಇದುವರೆಗೆ ಸೀಮಿತವಾಗಿತ್ತು. ಆದರೆ ಮುಂದಿನ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಪಕ್ಷವನ್ನು ಬಲಪಡಿಸುವ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈಗಾಗಲೇ ಬೆಂಗಳೂರಿನ 20 ವಿಧಾನಸಭೆ ಕ್ಷೇತ್ರಗಳ ಪೈಕಿ 6 ಸ್ಥಾನಗಳ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದ್ದು, ಅವರು ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಇನ್ನಿತರೆ ಕ್ಷೇತ್ರಗಳಲ್ಲಿ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಣಕ್ಕಿಳಿಸಲಾಗುತ್ತದೆ. ಅಭ್ಯರ್ಥಿಯು ಚುನಾವಣೆ ಆಯೋಗವು ನಿಗದಿ ಮಾಡಿದ ವೆಚ್ಚದ ಮಿತಿಯನ್ನು ಮೀರದಂತೆ ಪ್ರಚಾರ ಕೈಗೊಳ್ಳಬೇಕು. ಆಯೋಗದ ನೀತಿ ನಿಯಮಗಳಿಗೆ ಬದ್ಧರಾಗಿ ಚುನಾವಣೆ ಎದುರಿಸಲಿದ್ದಾರೆಂದು ತಿಳಿಸಿದರು.
ಸೂಕ್ತ ಅಭ್ಯರ್ಥಿ: ಈಗಾಗಲೇ ರಾಜ್ಯಾದ್ಯಂತ ಒಂದು ಸುತ್ತಿನ ಪ್ರವಾಸ ಕೈಗೊಂಡಿದ್ದು, ಸದ್ಯ ಎರಡನೇ ಬಾರಿಗೆ ಜಿಲ್ಲಾ ಪ್ರವಾಸ ಕೈಗೊಳ್ಳು ತ್ತಿರುವುದಾಗಿ ಹೇಳಿದ ಅವರು, ಪಕ್ಷ ಪ್ರಾಮಾಣಿಕ ಹಾಗೂ ಸಾಮಾಜಿಕ ಕಳಕಳಿಯ ವ್ಯಕ್ತಿಯನ್ನೇ ಅಭ್ಯರ್ಥಿಯಾಗಿಸಲಿದೆ. ಸಮಾನ ಮನಸ್ಕರು ಪಕ್ಷದ ಪ್ರಮುಖರನ್ನು ಸಂಪರ್ಕಿಸಬಹುದಾಗಿದೆ ಎಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಪಕ್ಷದ ಮುಖಂಡ ದೀಪಕ್ ಇದ್ದರು.

ಬಹಿಷ್ಕಾರಕ್ಕೆ ನಿರ್ಧಾರ
ಲಿಂಗಸ್ಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ 20ನೇ ವಾರ್ಡಿನ ಮತದಾರರು ಬರುವ ಚುನಾವಣೆ ಬಹಿಷ್ಕರಿಸಲು ನಿರ್ಧರಿಸಲಾಗಿದೆ ಎಂದು ವಾರ್ಡ್ನ ಮುಖಂಡರಾದ ಸಿದ್ಧಲಿಂಗೇಶ್ವರ ಪಾಟೀಲ್, ರಮೇಶ, ಕುಪ್ಪಣ್ಣ, ಮಲ್ಲಪ್ಪ, ಶರಣಪ್ಪ, ವೀರಭದ್ರಪ್ಪ, ಬಸವರಾಜ, ಶಿವುಕುಮಾರ ಸೇರಿದಂತೆ ಅನೇಕ ನಾಗರೀಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಸದರಿ ವಾರ್ಡಿನಿಂದ ಬಂದು ಸ್ಪರ್ಧಿಸಿ ಆಯ್ಕೆಯಾಗಿ ಬಂದ ನಂತರ ಸೌಲಭ್ಯ ಕಲ್ಪಿಸಿಲ್ಲ.ಅಲ್ಲದೆ, ಸದರಿ ವಾರ್ಡಿನ ಚುನಾಯಿತ ಪ್ರತಿನಿಧಿಗಳು ಹೆಸರಿಗೆ ಮಾತ್ರ ಚುನಾಯಿತರಾಗಿ ಅಧಿಕಾರಿಗಳು ಇವರಿಗೆ ಮಾನ್ಯತೆ ನೀಡದೆ ಇವರ ನಿಯಂತ್ರಣದಲ್ಲಿ ಇರುವುದಿಲ್ಲ ಮತ್ತು ನಡೆದ ಅವ್ಯವಹಾರಗಳ ಕುರಿತು ಇವರಿಗೆ ಮಾಹಿತಿ ಇರುವುದಿಲ್ಲ. ಇಂತಹ ಅಭ್ಯರ್ಥಿಗಳನ್ನು ಆರಿಸುವಲ್ಲಿ ಯಾವ ಪುರುಷಾರ್ಥವಿದೆ? ಕಾರಣ ಅಭ್ಯರ್ಥಿಗಳು 20ನೇ ವಾರ್ಡಿಗೆ ಸ್ಪರ್ಧಿಸಬಾರದು. ಒಂದು ವೇಳೆ ಸ್ಪರ್ಧಿಸಿದರೆ ಮತದಾನ ಮಾಡುವುದಿಲ್ಲವೆಂದು ಎಚ್ಚರಿಕೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನಾಳೆ CJPಯ ತಿರಂಗಾ ಮೆರವಣಿಗೆ ನಡೆಯಬೇಕಿದ್ದ ದೆಹಲಿಯ ಸೆಂಟ್ರಲ್ ಪಾರ್ಕ್ ಅನ್ನು 2 ದಿನ ಮುಚ್ಚಿದ NDMC!

ಕನ್ನಡಿಗರು ಕೊಟ್ಟ ದುಡ್ಡಲ್ಲೇ AR Rahman ತಮ್ಮ ಮೊದಲ ಸ್ಟುಡಿಯೋ ಕಟ್ಟಿದ್ದು: ನಟ ಯಶ್

ದೇಶಕ್ಕೆ ಹೇಗೆ ಬೆಂಕಿ ಹಚ್ಚಬೇಕು ಎಂಬುದನ್ನು ಬಾಂಗ್ಲಾದೇಶ ನಮಗೆ ತೋರಿಸಿಕೊಟ್ಟಿದೆ: ನೇಹಾ ಬೋರಾ ಹೇಳಿಕೆಗೆ ಬಿಜೆಪಿ ಆಕ್ರೋಶ!

Ramayana: 'ರಾಮಾಯಣ'ದ ರನ್ ಟೈಮ್ ಮೂರು ಗಂಟೆಗೂ ಹೆಚ್ಚು; ಅಮೆರಿಕದಲ್ಲಿ 'PG-13' ರೇಟಿಂಗ್!

ದೆಹಲಿಯ ರಾಮಲೀಲಾದಲ್ಲಿ ಈ ಬಾರಿ ರಾವಣನ ಜೊತೆಗೆ 30 ಅಡಿ ಎತ್ತರದ ಕಾಕ್ರೋಚ್ ಪ್ರತಿಕೃತಿ ದಹನ!