ಸಿಂಧನೂರು: ಮಹಿಳೆ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ ಪೊಲೀಸರು ನ್ಯಾಯ ಒದಗಿಸಬೇಕು. ಸಾರ್ವಜನಿಕರಿಗೆ ಲಿಂಗ ಸಂವೇದನಾಶೀಲತೆಯ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದು ಜಿಲ್ಲಾ ಲಿಂಗ ಸಂವೇದನಾಶೀಲತೆಯ ಕಾರ್ಯಕ್ರಮದ ಜಿಲ್ಲಾ ಪ್ರತಿನಿಧಿ ಅಜಿತ್ಕುಮಾರ್ ಸಿಂಗ್ ಮನವಿ ಮಾಡಿದರು. ನಗರದ ಪೊಲೀಸ್ ಠಾಣಾ ಆವರಣದಲ್ಲಿ ಲಿಂಗ ಸಂವೇದನಾಶೀಲತೆ ಕುರಿತು ಪೊಲೀಸರಿಗೆ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿ, ಮಕ್ಕಳ ಮತ್ತು ಮಹಿಳೆಯರ ಸಾಗಾಣಿಕೆ ತಡೆಯುವಲ್ಲಿ ಇಲಾಖೆ ಜಾಗೃತವಾಗಬೇಕು. ಲಿಂಗಸಂವೇದನಾಶೀಲತೆ ಬಗ್ಗೆ ಸಂಪೂರ್ಣ ಅರ್ಥೈಸಿಕೊಂಡು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಡಿವೈಎಸ್ಪಿ ಎಸ್.ಎಂ. ಸೂರ್ಯವಂಶಿ ಮಾತನಾಡಿ, ಶಿಸ್ತು ಮೈಗೂಡಿಸಿಕೊಂಡು ಪೊಲೀಸರು ಕಾರ್ಯನಿರ್ವಹಿಸಬೇಕು. ಗೌರವ ಕೊಡುವುದರಿಂದ ತಮ್ಮ ಗೌರವವನ್ನು ಹೆಚ್ಚಿಸಿಕೊಂಡಂತಾಗುತ್ತದೆ ಎಂದ ಅವರು, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಅತ್ಯಾಚಾರ ಪ್ರಕರಣಗಳು ಕಂಡು ಬರುತ್ತಿದ್ದು ಈ ಬಗ್ಗೆ ಎಚ್ಚರಿಕೆ ವಹಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಿಪಿಐ ರಮೇಶ ಬಿ. ರೊಟ್ಟಿ. ನಗರ ಠಾಣೆ ಪಿಎಸ್ಐ ಬಾಳನಗೌಡ ಹಾಗೂ ಸಿಬ್ಬಂದಿ ಇದ್ದರು.