ಮುದಗಲ್: ಭಾಗ್ಯಲಕ್ಷ್ಮೀ ಯೋಜನೆ, ಶಾಲಾ ಮಕ್ಕಳ ಬ್ಯಾಂಕ್ ಖಾತೆ, ಅಲ್ಪಸಂಖ್ಯಾತರ ನಿಗಮದಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಮಂಜೂರಾಗುವ ಶಿಷ್ಯ ವೇತನ ಪಡೆಯಲು ಬ್ಯಾಂಕ್ಗಳಲ್ಲಿ ಖಾತೆ ತೆರೆಯಲು ಪಾಲಕರು ಪಟ್ಟಣದ ಬ್ಯಾಂಕ್ಗಳ ಮುಂದೆ ಸರದಿಯಲ್ಲಿ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿತ್ತು.
ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಹೆಣ್ಣು ಮಕ್ಕಳಿಗಾಗಿ ಜಾರಿಗೆ ತರಲಾದ ಭಾಗ್ಯಲಕ್ಷ್ಮೀ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಂದ ಈಗ ಶಿಶು ಅಭಿವೃದ್ಧಿ ಯೋಜನಾಧಿಕಾರಿಗೆ ಬ್ಯಾಂಕ್ ಖಾತೆ ನೀಡಬೇಕೆಂದು ಆದೇಶ ಮಾಡಿರುವ ಹಿನ್ನೆಲೆ ಭಾಗ್ಯಲಕ್ಷ್ಮೀ ಫಲಾನುಭವಿಗಳು ಬ್ಯಾಂಕ್ ಖಾತೆಗಾಗಿ ಪರದಾಡುತ್ತಿದ್ದಾರೆ. ಎಸ್ಬಿಐ ಬ್ಯಾಂಕ್ನಲ್ಲಿ ಮಾತ್ರ ಖಾತೆಬೇಕೆಂದು ಅಂಗನವಾಡಿ ಕಾರ್ಯಕರ್ತೆಯರು ಹೇಳಿದ್ದಾರೆ.
ಖಾತೆ ತೆರೆಯಲು ಎಸ್ಬಿಐ ವ್ಯವಸ್ಥಾಪಕರು ಖಾತೆ ಫಾರಂ ನೀಡುತ್ತಿಲ್ಲ, ಕೆಲವು ಪಾಲಕರಿಗೆ ಫಾರಂ ಹಂಚಿಕೆ ಮಾಡಿದರೂ ಭರ್ತಿ ಮಾಡಿದ ಫಾರಂ ಕೊಡಲು ಬೆಳಗ್ಗೆಯಿಂದ ಸರದಿಯಲ್ಲಿ ನಿಲ್ಲಬೇಕು. ದಿನಕ್ಕೆ 10 ಜನರಿಗೆ ಮಾತ್ರ ಖಾತೆ ತೆರೆಯಲು ಅವಕಾಶ ನೀಡಲಾಗುತ್ತಿದೆ ಎಂದು ಪಾಲಕರು ದೂರಿದರು.