ರಾಯಚೂರು: ನಗರದಲ್ಲಿ ಜು.27ರಂದು ಹೃದ್ರೋಗ, ಕ್ಯಾನ್ಸರ್ ಮತ್ತು ಆರ್ಥೋಪೆಡಿಕ್ಗೆ ಉಚಿತ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಇಲ್ಲಿನ ಐಎಂಎ ಹಾಲ್ ನಲ್ಲಿ ಜು.27ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಕೃಷ್ಣ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಸಿಕಂದರಾಬಾದ್ ವತಿಯಿಂದ ಚಿಕಿತ್ಸೆ ಶಿಬಿರ ಆಯೋಜಿಸಿದ್ದು, ಇಸಿಜಿ, ರಕ್ತದ ಸಕ್ಕರೆ ಪ್ರಮಾಣ ಉಚಿತವಾಗಿ ಪರೀಕ್ಷಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಶಿಬಿರದಲ್ಲಿ ಹೃದ್ರೋಗ, ಕ್ಯಾನ್ಸರ್ ಮತ್ತು ಎಲುವು ಕೀಲು ಸಂಬಂಧಿ ಸಮಸ್ಯೆಗಳಿಗೆ ಉಚಿತ ತಪಾಸಣೆ ಮಾಡಲಾಗುತ್ತದೆ. ಕಾರಣ ರೋಗಿಗಳು ಶಿಬಿರದ ಪ್ರಯೋಜನ ಪಡೆಯಲು ಕೋರಲಾಗಿದೆ.
ಸಮಾವೇಶ ಇಂದು
ರಾಯಚೂರು: ಭಾರತೀಯ ಜೀವ ವಿಮಾ ನಿಗಮದ ವಿಮಾ ನೌಕರರ ಸಂಘದ ಮಹಿಳಾ ಉಪ ಸಮಿತಿಯಿಂದ ಜು.27ರಂದು 14ನೇ ಮಹಿಳಾ ಸಮಾವೇಶ ಆಯೋಜಿಸಲಾಗಿದೆ. ಅಂದು ನಗರದ ಎಲ್ಐಸಿ ವಿಭಾಗೀಯ ಕಚೇರಿಯ ಆವರಣದಲ್ಲಿ ಬೆಳಗ್ಗೆ 10.30ಕ್ಕೆ ನಡೆಯುವ ಸಮಾವೇಶವನ್ನು ಬೆಂಗಳೂರಿನ ಮಹಿಳಾ ಉಪ ಸಮಿತಿಯ ಸಂಯೋಜಕಿ ಎಂ. ವಿಜಯಕುಮಾರಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ವಿ.ಎಸ್. ಜಮುನಾ ವಹಿಸಲಿದ್ದಾರೆ. ಸಮಾವೇಶದಲ್ಲಿ ವಿಮಾ ನೌಕರರ ಸಂಘದ ವಿವಿಧ ಘಟಕಗಳ ಪ್ರಮುಖರು ಹಾಗೂ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆಂದು ವಿಮಾ ನೌಕರರ ಸಂಘ ತಿಳಿಸಿದೆ.
ಪತ್ರಿಕಾ ದಿನಾಚರಣೆ ಸ್ಥಳ ಬದಲು
ರಾಯಚೂರು: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ವತಿಯಿಂದ ಜು.27ರಂದು ಆಯೋಜಿಸಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದ ಸ್ಥಳದಲ್ಲಿ ಬದಲಾವಣೆ ಮಾಡಿರುವುದಾಗಿ ಸಂಘದ ಅಧ್ಯಕ್ಷ ಚೆನ್ನಬಸವಣ್ಣ ತಿಳಿಸಿದ್ದಾರೆ. ಈ ಕುರಿತು ಪ್ರಕಟಣೆ ನೀಡಿರುವ ಅವರು, ಈ ಮೊದಲು ಕಾರ್ಯಕ್ರಮವನ್ನು ಜಿಪಂ ಸಭಾಂಗಣದಲ್ಲಿ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಸದ್ಯ ಸ್ಥಳ ಬದಲಾವಣೆ ಮಾಡಲಾಗಿದೆ. ಜು.27ರಂದು ಬೆಳಗ್ಗೆ ಈ ಕಾರ್ಯಕ್ರಮವು ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಪೂರ್ವ ನಿಗದಿತ ಸಮಯದಂತೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಅತ್ಯಾಚಾರ ಪ್ರಕರಣಕ್ಕೆ ಖಂಡಿಸಿ ಪ್ರತಿಭಟನೆ
ದೇವದುರ್ಗ: ರಾಜ್ಯದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರದ ಪ್ರಕರಣಗಳು ನಿರಂತರ ನಡೆಯುತ್ತಿರುವುದನ್ನು ಖಂಡಿಸಿ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿ ಎಬಿವಿಪಿ ಕಾರ್ಯಕರ್ತರು ಇತ್ತೀಚೆಗೆ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪ್ರತಿಭಟನಾ ಮೆರವಣಿಗೆ ನಡೆಸಿದ ಎಬಿವಿಪಿ ಕಾರ್ಯಕರ್ತರು, ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ, ಅತ್ಯಾಚಾರ ಪ್ರಕರಣದ ಆರೋಪಿಗಳನ್ನು ತಕ್ಷಣವೇ ಬಂಧಿಸುವ ಕಠಿಣ ನಿಲುವನ್ನು ಗೃಹ ಇಲಾಖೆ ತೆಗೆದುಕೊಳ್ಳಬೇಕು. ಅತ್ಯಾಚಾರ ಪ್ರಕರಣ ದಾಖಲಾದ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳೂ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಮಹಿಳೆಯರಿಗೆ ನೈತಿಕ ಸ್ಥೈರ್ಯ ತುಂಬಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಸಂಘಟನೆಯ ಜಿಲ್ಲಾ ಸಂಚಾಲಕ ಬಸನಗೌಡ, ವಿದ್ಯಾರ್ಥಿಗಳಾದ ಶರಣು, ಸಿದ್ಧಾರೂಢ, ಕುಮಾರಿ ದೇವಮ್ಮ, ಅಯ್ಯಮ್ಮ, ಶಿವರಾಮ, ವೆಂಕಟೇಶ, ಕೃಷ್ಣಾ ಸೇರಿ ಅನೇಕರಿದ್ದರು.