-ಪಂಪಯ್ಯ ಮಠ
ಮುದಗಲ್: ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು ವರ್ಷ ಗತಿಸಿದರೂ ಅಭಿವೃದ್ಧಿ ಮಾತ್ರ ಶೂನ್ಯ.
ಕುಡಿವ ನೀರಿನ ಸಮಸ್ಯೆ ತಲೆದೋರಿದೆ. ಸ್ವಚ್ಛತೆ ಗೌಣವಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ, ಚರಂಡಿಗಳು ತುಂಬಿ ರಸ್ತೆಗೆ ಹರಿಯುತ್ತಿರುವ ಕೊಚ್ಚೆ ನೀರು. ವಾರ್ಡ್ಗಳಲ್ಲಿ ಸಂಚರಿಸುವ, ವಾಸಿಸುವ ಜನರು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಪಪಂ ಕಾರ್ಯಾಲಯದಲ್ಲಿ ನಾಗರಿಕರ ದೂರು ಕೇಳೋರಿಲ್ಲ.
ಪಟ್ಟಣ ಪಂಚಾಯಿತಿ ನೌಕರರನ್ನು ಹಿಡಿತದಲ್ಲಿಟ್ಟುಕೊಂಡು ಅಧಿಕಾರ ನಡೆಸಬೇಕಾಗಿದ್ದ ಮುಖ್ಯಾಧಿಕಾರಿ ಅಮಾನತುಗೊಂಡಿದ್ದಾರೆ. ಅಭಿವೃದ್ಧಿ ಕಾಮಗಾರಿಗಳ ಯೋಜನೆ ಸಿದ್ಧಪಡಿಸಬೇಕಾದ ಎಂಜಿನಿಯರ್ ಇಲ್ಲ. ಗ್ರಾಮದ ಸ್ವಚ್ಛತೆ ಮಾಡಿಸಲು ಸೆನೆಟರಿ ಇನ್ಸ್ಪೆಕ್ಟರ್ ಹುದ್ದೆ ಖಾಲಿಯಿದೆ. ಇನ್ನುಳಿದ ನೌಕರರಿಗೆ ಹೇಳೋರಿಲ್ಲ, ಕೇಳೋರಿಲ್ಲ. ಈಗ ನಡೆದಿರೋದು ತುಘಲಕ್ ದರ್ಬಾರ್ ಮಾತ್ರ.
ಹೀಗಿದೆ ನೋಡಿ..: ವಾರ್ಡುಗಳಲ್ಲಿನ ಸಮಸ್ಯೆ ಹೊತ್ತು ತರುವ ಚುನಾಯಿತ ಸದಸ್ಯರ ಅಹವಾಲು ಕೇಳುವವರಿಲ್ಲ. ನೌಕರರು ತಮಗಿಷ್ಟ ಬಂದರೆ ಕೆಲಸಕ್ಕೆ ಬರುತ್ತಾರೆ, ಇಲ್ಲವಾದರೆ ಹಾಜರಿ ಪುಸ್ತಕದಲ್ಲಿ ಸಹಿ ಮಾಡಿ ಹೋಗುತ್ತಾರೆ. ಬೀದಿದೀಪ, ಸ್ವಚ್ಛತೆಗೆ ಸಾರ್ವಜನಿಕರು ಹೇಳಲು ಹೋದರೆ ಮುಖ್ಯಾಧಿಕಾರಿಗಳಿಲ್ಲ ಎನ್ನುತ್ತಾರೆ. ಆಸ್ತಿಗಳ ಮುಟೇಶನ್ ಮಾಡಲು ಅರ್ಜಿ ಕೊಟ್ಟು ವರ್ಷವಾದ್ರೂ ಆಗಿಲ್ಲ.
ಆಡಳಿತದ ಚುಕ್ಕಾಣಿ ಹಿಡಿದಿರುವ ಅಧ್ಯಕ್ಷರು, ಆಡಳಿತ ಪಕ್ಷದ ಸದಸ್ಯರು ಗ್ರಾಮದ ಸಮಸ್ಯೆಗಳು ತಮಗೆ ಸಂಬಂಧವಿಲ್ಲ ಎನ್ನುವಂತಿದ್ದಾರೆ. ಏನಾದರೂ ಕೇಳಿದರೆ ಮುಖ್ಯಧಿಕಾರಿ ಇಲ್ಲ, ಎಂಜಿನಿಯರ್ ಇಲ್ಲ.. ಹೀಗೆ ಹೇಲಿ ಸಾಗ ಹಾಕುವುದು ಬಿಟ್ಟರೆ ಮತ್ತೇನೂ ಇವರಲ್ಲಿಲ್ಲ.
13 ಕೋಟಿ ಅನುದಾನ: ಪಟ್ಟಣದ ಅಭಿವೃದ್ಧಿಗೆ ರಾಜ್ಯ ಸರ್ಕಾರದ ಎಸ್ಎಫ್ಸಿ ಮತ್ತು 13ನೇ ಹಣಕಾಸು, ಎಸ್ಜೆಎಸ್ಆರ್ವೈ, ಹಿಂದುಳಿದ ಪ್ರದೇಶಾಭಿವೃದ್ಧಿ, ಮುಖ್ಯಮಂತ್ರಿಗಳ ವಿಶೇಷ ಅನುದಾನ ಸೇರಿ ಒಟ್ಟು 13 ಕೋಟಿ ಅನುದಾನ ಪಪಂ ಖಾತೆಗೆ ಜಮಾ ಇದ್ದರೂ ಯೋಜನೆ ಸಿದ್ಧಪಡಿಸಿ ಅಭಿವೃದ್ಧಿ ಪಡಿಸುವಲ್ಲಿ ಆಡಳಿತ ಮಂಡಳಿ ಸಂಪೂರ್ಣ ವಿಫಲವಾಗಿದೆ.
ಎಂಜಿನಿಯರ್ ಇಲ್ಲದ ಕಾರಣ ಕ್ರಿಯಾಯೋಜನೆಗಳನ್ನು ಸಿದ್ಧಪಡಿಸುವಲ್ಲಿ ವಿಳಂಬವಾಗಿದ್ದರಿಂದ ಸರ್ಕಾರದ ಅನುದಾನ ವಾಪಸಾಗುವ ಹಂತಕ್ಕೆ ತಲುಪಿದೆ. ಸುಮಾರು 80 ಲಕ್ಷ ವೆಚ್ಚದ ಕಾಮಗಾರಿಗೆ ಟೆಂಡರ್ ಕರೆದು ಗುತ್ತಿಗೆ ನೀಡಿದ್ದರೂ ಗುತ್ತಿಗೆದಾರರು ಕಾಮಗಾರಿ ಆರಂಭಿಸಿಲ್ಲ. ಈ ಬಗ್ಗೆ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಚಕಾರ ಎತ್ತುತ್ತಿಲ್ಲ.
ಅಪೂರ್ಣ: ಇನ್ನು ಸ್ಥಳೀಯ ಪೊಲೀಸ್ ಠಾಣೆಯಿಂದ ಮಸ್ಕಿ ಕ್ರಾಸ್ ರಸ್ತೆ ಕಾಮಗಾರಿ ಅವಧಿ ಮುಗಿದರೂ ಪೂರ್ಣಗೊಂಡಿಲ್ಲ. ಅಪೂರ್ಣ ಕಾಮಗಾರಿಯೂ ಕಿತ್ತು ಹೋಗಿದ್ದು 60 ಲಕ್ಷ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಸಾರ್ವಜನಿಕ ಮಹಿಳಾ ಶೌಚಾಲಯಗಳೂ ಅರ್ಧಕ್ಕೆ ನಿಂತಿವೆ.
ಜೆಡಿಎಸ್ ಸದಸ್ಯರೇ ಅಧಿಕಾರದಲ್ಲಿದ್ದು ಶಾಸಕ ಮಾನಪ್ಪ ವಜ್ಜಲ್ ಮುದಗಲ್ ಪಪಂ ಆಡಳಿತ ಮಂಡಳಿಯ ಕಾರ್ಯವೈಖರಿ ಬಗ್ಗೆ ಪರಿಶೀಲಿಸಬೇಕಾಗಿದೆ. ಸಭೆ ಕರೆದು ಅಭಿವೃದ್ಧಿ ಕಾರ್ಯಗಳ ಕುರಿತು ಖುದ್ದಾಗಿ ಪರಿಶೀಲಿಸಬೇಕಾಗಿದೆ. ಇಲ್ಲದಿದ್ದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರಾರು ಎನ್ನುವ ಪರಿಸ್ಥಿತಿ ಪಪಂ.ಯದ್ದಾಗುತ್ತದೆ.