ರಾಯಚೂರು: ಹಿಂದುಳಿದ ವರ್ಗಗಳ ಬಲವರ್ಧನೆ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರು ಮುಂದಾಗಬೇಕೆಂದು ಮಾಜಿ ಎಂಎಲ್ಸಿ ಶಂಕ್ರಪ್ಪ ಕರೆ ನೀಡಿದರು. ನಗರದಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಸಮಾರಂಭ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಪಕ್ಷದ ಬಲವರ್ಧನೆಗೆ ಮುಂದಾಗುವಂತೆ ಮನವಿ ಮಾಡಿದರು. ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ ಮಾತನಾಡಿದರು. ಮೋರ್ಚಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶೋಕ ಗಸ್ತಿ, ಬಸವರಾಜ, ತ್ರಿವಿಕ್ರಂ ಜೋಷಿ, ಬಂಡೇಶ್ ವಲ್ಕಂದಿನ್ನಿ, ಮಲ್ಲಿಕಾರ್ಜುನ, ದೇವಿಸಿಂಗ್, ರಮಾನಂದ ಅನೇಕರಿದ್ದರು.
ಉಪವಾಸ ದೇವತಾರಾಧನೆ
ಸಿಂಧನೂರು: ರಂಜಾನ್ ತಿಂಗಳಲ್ಲಿ ಉಪವಾಸ ವ್ರತ ಮಾಡಿದರೆ ದೇವತಾರಾಧನೆ ಮಾಡಿದಂತಾಗುತ್ತದೆ ಎಂದು ಗರ್ಲ್ಸ್ ಇಸ್ಲಾಮಿಕ್ ಆರ್ಗ್ನೈಸೇಷನ್ ಅಧ್ಯಕ್ಷೆ ಪರ್ವಿನ್ ಜಹಾನ್ ಅಭಿಪ್ರಾಯಪಟ್ಟರು. ನಗರದ ಎಕ್ಸ್ಲೆಂಟ್ ಪಪೂ ಕಾಲೇಜಿನಲ್ಲಿ ಏರ್ಪಡಿಸಿದ್ದ ಇಸ್ತಾಖಬಾಲ್ ಎ. ರಂಜಾನ್ ಕಾರ್ಯಕ್ರಮದಲ್ಲಿ ಮಾತನಾಡಿದರು. ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಸದಸ್ಯೆ ಸಲೀಂ ಬೇಗಂ ಮಾತನಾಡಿ, ರಂಜಾನ್ ಹಬ್ಬದ ವಿಶೇಷತೆಗಳನ್ನು ವಿವರಿಸಿದರು. ಅಸ್ಮಾ ಪರ್ವಿನ್ ನಿರೂಪಿಸಿದರು. 300ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಮಹಿಳೆ ಆತ್ಮಹತ್ಯೆ
ರಾಯಚೂರು: ತಾಲೂಕಿನ ಶಕ್ತಿನಗರದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ರೇಖಾ ಎಂದು ಗುರುತಿಸಲಾಗಿದೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈಕೆ ಮನೆಯಲ್ಲಿ ಬೆಂಕಿ ಹಚ್ಚಿಕೊಂಡಿದ್ದು ತೀವ್ರ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆ. ಅಡಿವೆಪ್ಪ ನಿಧನ
ರಾಯಚೂರು: ಸಂಜೆವಾಣಿ ಪತ್ರಿಕೆ ಜಿಲ್ಲಾ ವರದಿಗಾರ ಕೆ.ಸತ್ಯನಾರಾಯಣ ಅವರ ತಂದೆ ಕೆ.ಅಡಿವೆಪ್ಪ(78) ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಕೆಲ ದಿನಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಪತ್ನಿ, ಮೂವರು ಪುತ್ರರು, ನಾಲ್ವರು ಪುತ್ರಿಯರು ಸೇರಿ ಅಪಾರ ಬಂಧುಗಳನ್ನಗಲಿದ್ದಾರೆ. ಮೃತರ ಅಂತ್ಯಕ್ರಿಯೆ ನಗರದಲ್ಲಿ ಸೋಮವಾರ ಮಧ್ಯಾಹ್ನ ನೆರವೇರಿಸಲಾಯಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.