ರಾಯಚೂರು: ದಲಿತ ಎನ್ನುವ ಪದವನ್ನು ಅಸ್ಪೃಶ್ಯತೆಗೆ ಸಮಾನ ಎಂದು ಬಿಂಬಿಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ದಲಿತ ಪದ ಅಸ್ಪೃಶ್ಯತೆಗೆ ಸಮಾನವಾದುದಲ್ಲ ಎಂದು ಸಂವಿಧಾನದ ದಾಖಲಿಸಿದ್ದರೂ, ಈ ಬಗ್ಗೆ ದಲಿತ ಪರ ಸಂಘಟನೆಗಳು ಅನಾವಶ್ಯಕ ಗೊಂದಲ ಸೃಷ್ಟಿಸುತ್ತಿವೆ ಎಂದು ಡಾ.ಅಂಬೇಡ್ಕರ್ ಪೀಪಲ್ಸ್ ಪಾರ್ಟಿ ಸಂಸ್ಥಾಪಕ ದೇವಮಿತ್ರ ವಕೀಲರು ಕರೆ ನೀಡಿದರು.
ಅವರು ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪಕ್ಷವು ಬಾಬಾ ರಾಮದೇವ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಂಡಿಲ್ಲ. ದಲಿತ ಪದ ಬಳಕೆ ಅಸ್ಪೃಶ್ಯತೆಗೆ ಸಮಾನವಾದುದ್ದಲ್ಲ ಎಂಬುದನ್ನು ಅರಿಯಬೇಕಿದೆ. ದಲಿತ ಪದದ ಅರ್ಥ ತಿಳಿದುಕೊಳ್ಳಬೇಕಿದೆ ಎಂದು ಹೇಳಿದ ಅವರು, ದಲಿತ ಪರ ಸಂಘಟನೆಗಳವರು ಕಾಂಗ್ರೆಸ್‌ಗೆ ಬೆಂಬಲ ನೀಡಿ, ದಲಿತರ ಪರ ಹೋರಾಟ ಮಾಡುವುದೂ ಸರಿಯಲ್ಲ ಎಂದೂ ಟೀಕಿಸಿದರು.
ಪ್ರಕರಣ ದಾಖಲಾಗೊಲ್ಲ: ದಲಿತ ಎಂದು ನಿಂದಿಸಿದ್ದಾರೆ ಎಂದು ಠಾಣೆಯಲ್ಲಿ ದೂರು ನೀಡಿದರೆ, ಎಸ್ಸಿ, ಎಸ್ಟಿ ಕಾಯಿದೆ 1989 ಕಲಂ 3ರ ಪ್ರಕಾರ ಪ್ರಕರಣ ದಾಖಲಾಗುವುದಿಲ್ಲ. ರಾಮದೇವ ವಿರುದ್ಧ ಸಂಘಟನೆಗಳು ನಡೆಸುವ ಹೋರಾಟ ವ್ಯರ್ಥವಾಗಲಿದೆ ಎಂದ ಅವರು, 60 ವರ್ಷ ದೇಶವಾಳಿದರೂ ಕಾಂಗ್ರೆಸ್ ದಲಿತರಿಗೆ ಹೇಳಿಕೊಳ್ಳುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದರು.
1980ರಲ್ಲಿ ಒಬಿಸಿ ಜಾತಿಗಳಾದ ವಡ್ಡರ, ಲಮಾಣಿ, ಕೊರಚ, ಕೊರಮ ಎಸ್ಸಿ ಮೀಸಲಾತಿ ವ್ಯಾಪ್ತಿಗೆ ಕಾಂಗ್ರೆಸ್ ಸರ್ಕಾರ ಸೇರಿಸಿದ ವೇಳೆ ದಲಿತ ಸಂಘಟನೆಗಳು ಮೌನ ವಹಿಸಿದ್ದವು. ಅಸ್ಪೃಶ್ಯರ ಸವಲತ್ತು ಕಾಂಗ್ರೆಸ್ ಕಿತ್ತುಕೊಂಡಾಗ, ಅಂದು ಯಾಕೆ ಹೋರಾಟ ಮಾಡಲಿಲ್ಲ ಎಂದು ಪ್ರಶ್ನಿಸಿದರು.
ಅಂಬೇಡ್ಕರ್ ಭಾವಚಿತ್ರ ಬಳಸುತ್ತಿರುವ ಸಂಘಟನೆಗಳು ಯಾವ ಜಾತಿಗಳ ಅಭಿವೃದ್ಧಿಗಾಗಿ ಹೋರಾಡುತ್ತಿವೆ ಎಂಬ ಗೊಂದಲ ಮೂಡಿದೆ. ಹೈ.ಕ. ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ರಾಮಾಂಜಿನಯ್ಯ ತಮ್ಮ ಪಕ್ಷದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದು, ಕಾನೂನು ಪ್ರಜ್ಞೆಯಿಲ್ಲದೇ ಹೇಳಿಕೆ ನೀಡುವುದು ಸಮಂಜಸವಲ್ಲವೆಂದು ಸಲಹೆ ನೀಡಿದರು.
ನಾಳೆ ಮನವಿ ಸಲ್ಲಿಕೆ: ದಲಿತ ಪದ ಯಾವುದೇ ಕಾರಣಕ್ಕೂ ಅಸ್ಪಶ್ಯ ಪದಕ್ಕೆ ಸಮಾನವಲ್ಲ. ಆದ್ದರಿಂದ ಸರ್ಕಾರ ಯಾವುದೇ ಯೋಜನೆಯಲ್ಲಿ ದಲಿತ ಪದ ಬಳಬಾರದು ಎಂದು ಒತ್ತಾಯಿಸಿ, ತಮ್ಮ ಪಕ್ಷವು ಮೇ 9ರಂದು ಜಿಲ್ಲಾಧಿಕಾರಿ ಮೂಲಕ ರಾಜ್ಯದ ಸಿಎಂಗೆ ಮನವಿ ಸಲ್ಲಿಸಲಿದೆ. ಅಂದು ನಗರದ ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಮನವಿ ಸಲ್ಲಿಸಲಾಗುತ್ತದೆ ಎಂದು ವಿವರಿಸಿದರು.
ಈ ಮೆರವಣಿಗೆಯಲ್ಲಿ ಕರ್ನಾಟಕ ಛಲವಾದಿ ಸಂಘದ ರಾಜ್ಯಾಧ್ಯಕ್ಷ ಮಾರುತಿರಾವ್, ಪಕ್ಷದ ಉಪಾಧ್ಯಕ್ಷ ಸಾಯಿಬಣ್ಣ ಬನ್ನಟ್ಟಿ, ಕಾರ್ಯದರ್ಶಿ ಎಂ. ರಾಮಕೃಷ್ಣ, ಆರ್. ಕುಪ್ಪಸ್ವಾಮಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಕರ್ನಾಟಕ ಪ್ರದೇಶ ಮಾದಿಗರ ಸಂಘದ ಜಿಲ್ಲಾಧ್ಯಕ್ಷ ಸಿ.ಎಂ.ನಾರಾಯಣ, ಕಾರ್ಯದರ್ಶಿ ಭೀಮೇಶ ಗಾಣದಾಳ, ತಾಲೂಕು ಅಧ್ಯಕ್ಷ ಡಿ. ಆಂಜಿನಯ್ಯ ಗಾರಲದಿನ್ನಿ, ಚಲುವಾದಿಗರ ಸಂಘದ ತಾಲೂಕಾಧ್ಯಕ್ಷ ವೆಂಕಟೇಶ ದಿನ್ನಿ ಸೇರಿ ಅನೇಕರಿದ್ದರು.