ಶಿವಮೊಗ್ಗ: ರಾಜ್ಯ ಉಚ್ಚ ನ್ಯಾಯಾಲಯದ ಸೂಚನೆಯಂತೆ ಸಾರ್ವಜನಿಕರ ಮಾಹಿತಿಗಾಗಿ ಜಿಲ್ಲೆಯ ಎಲ್ಲಾ ತಾಲೂಕಿನ ಗ್ರಾಪಂ, ನಗರಸಭೆ, ಪುರಸಭೆ ಮತ್ತು ಪಪಂಗಳಲ್ಲಿ ಸಂಬಂಧಿಸಿದ ಚಾಲ್ತಿಯಲ್ಲಿರುವ ಅಂಗೀಕೃತ ಪಡಿತರ ಚೀಟಿ, ಪರಿಶೀಲನಾ ಹಂತ, ರದ್ದು ಪಡಿಸಿರುವುದು ಮತ್ತು ನಿಲಂಬನೆ ರೀತಿಯಲ್ಲಿ ನ್ಯಾಯಬೆಲೆ ಅಂಗಡಿವಾರು ಮುದ್ರಣಮಾಡಿ ವಿವರವಾದ ಪಟ್ಟಿಯನ್ನು ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಸಾರ್ವಜನಿಕರು ಪ್ರಕಟಿತ ಪಟ್ಟಿಯನ್ನು ತಮ್ಮ ಸಮೀಪದ ಗ್ರಾಪಂ, ನಗರಸಭೆ, ಪುರಸಭೆ ಮತ್ತು ಪಪಂ ಕಾರ್ಯಾಲಯಗಳಲ್ಲಿ ವೀಕ್ಷಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸನ್ಮಾನ ಸಮಾರಂಭ
ಜೋಗ್ಫಾಲ್ಸ್: ವಿಪ್ರ ಸಮಾಜದ ಸದಸ್ಯರು ಒಗ್ಗಟ್ಟಾಗಿ ಚುನಾವಣೆಯಲ್ಲಿ ಸಮಾಜದ ಅಭ್ಯರ್ಥಿ ಅಥವಾ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ದೇಶಕ್ಕೆ ವಿಪ್ರ ಸಮಾಜದ ಶಕ್ತಿ ಏನೆಂಬುದನ್ನು ತೋರಿಸಬೇಕಾಗಿದೆ. ವಿಪ್ರರಿಗೆ ಜಾತಿ, ಅಧಿಕಾರದ ಬಗ್ಗೆ ವ್ಯಾಮೋಹ ಇಲ್ಲವಾದರೂ ಇಂದು ಜಾತಿ ರಾಜಕೀಯ ಹೆಚ್ಚುತ್ತಿದ್ದು, ವಿಪ್ರ ಬಾಂಧವರೂ ಆಡಳಿತದ ಚುಕ್ಕಾಣಿ ಹಿಡಿಯಲು ಅನಿವಾರ್ಯವಾಗಿ ಜಾತಿ ರಾಜಕೀಯ ಮಾಡಬೇಕಾದ ಸಂದರ್ಭ ಒದಗಿ ಬಂದಿದೆ ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯಾಧ್ಯಕ್ಷ ಡಾ.ಬಿ.ಎನ್.ವಿ. ಸುಬ್ರಮಣ್ಯಂ ತಿಳಿಸಿದರು.
ಅವರು ಕಾರ್ಗಲ್ನ ಶ್ರೀರಾಮ ಮಂದಿರದಲ್ಲಿ ಜೋಗ್ ಕಾರ್ಗಲ್ ವ್ಯಾಪ್ತಿಯ ವಿಪ್ರ ಕೂಟದಿಂದ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಜಂಟಿ ಕಾರ್ಯದರ್ಶಿ ಅಬಸೆ ದಿನೇಶ್ ಕುಮಾರ್ ಜೋಷಿ, ಮಾತನಾಡಿ, ಇಂದು ವಿಪ್ರ ಸಮಾಜದಲ್ಲಿ ಹಳ್ಳಿಯ ಯುವಕರಿಗೆ, ಕೃಷಿಕರಿಗೆ, ಪುರೋಹಿತರಿಗೆ ಅಡುಗೆ ಭಟ್ಟರಿಗೆ ಮದುವೆಗೆ ಹೆಣ್ಣು ಸಿಗದಿರುವುದು ಚಿಂತೆಗೆ ಕಾರಣವಾಗಿದ್ದು, ಇದು ಸಮಾಜದ ಎಲ್ಲಾ ಸದಸ್ಯರಿಗೂ ಸಮಸ್ಯೆಯಾಗಿದೆ. ಅದಕ್ಕೆ ಪರಿಹಾರವಾಗಿ ಉತ್ತರ ಭಾರತದ ಬ್ರಾಹ್ಮಣ ಸಮುದಾಯದ ಹೆಣ್ಣು ಮಕ್ಕಳನ್ನು ಇಲ್ಲಿನ ಅವಿವಾಹಿತ ಯುವಕರಿಗೆ ನೀಡುವ ಕುರಿತು ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದರು. ಮಾಜಿ ಸಚಿವ ಎಲ್.ಟಿ. ತಿಮ್ಮಪ್ಪ ಹೆಗಡೆ, ಡಿ.ಎಸ್. ಹೊನ್ನಪ್ಪ, ಚಿಪ್ಳಿ ಗೋಪಾಲಕೃಷ್ಣ ರಾವ್, ಮಾ.ಸ.ನಂಜುಂಡಸ್ವಾಮಿ, ಛಾಯಾಪತಿ, ಮೂಗಿಮನೆ ಮೊದಲಾದವರು ಹಾಜರಿದ್ದರು. ವನಿತಾ.ಎಂ. ಭಟ್ ಪ್ರಾರ್ಥಿಸಿದರು. ಮಂಜುನಾಥ್ ಭಟ್ ಮತ್ತು ಉಮೇಶ್ ಭಟ್ ವೇದಘೋಷ ಮಾಡಿದರು. ಎಂ.ಎಸ್. ಸತೀಶ್ ಸ್ವಾಗತಿಸಿದರು. ಅಶೋಕ್ ನಿರೂಪಿಸಿದರು.