ಸೊರಬ: ಪಟ್ಟಣ ಪಂಚಾಯತಿ ಚುನಾವಣೆ ಘೋಷಣೆ ಆಗುತ್ತಿದ್ದಂತೆಯೇ 11 ವಾರ್ಡ್ಗಳುಳ್ಳ ಸೊರಬ ಪಟ್ಟಣದಲ್ಲಿ ರಾಜಕೀಯ ಚಟುವಟಿಕೆ ಹೆಚ್ಚು ಕ್ರಿಯಾಶೀಲವಾಗಿದ್ದು, ಪ್ರತಿದಿನ ಸರಿ ರಾತ್ರಿಯವರೆಗೂ ಕಣಕ್ಕಿಳಿಸುವ ಅಭ್ಯರ್ಥಿ, ಅಭ್ಯರ್ಥಿ ಆಯ್ಕೆ, ಮತ ಬೇಡುವ ತಂತ್ರ ಮುಂತಾದವುಗಳ ಕುರಿತು ಗಹನ ಚರ್ಚೆ ನಡೆಯುತ್ತಿದೆ.
ಈಗಾಗಲೇ ಜೆಡಿಎಸ್ ಪ್ರತಿ ವಾರ್ಡಿನಿಂದ ತಮ್ಮ ಅಭ್ಯರ್ಥಿ ಪಟ್ಟಿ ಸಿದ್ಧತೆ ಕುರಿತು ಚರ್ಚೆ ನಡೆಸಿದ್ದು, ರಾಜ್ಯ ಯುವ ಘಟಕದ ಅಧ್ಯಕ್ಷ ಮಧು ಬಂಗಾರಪ್ಪ ಸಭೆ ಸೇರಿಸಿ ಆಯ್ಕೆ ಸಮಿತಿ ರಚಿಸಿದ್ದಾರೆ. ಈ ಸಮಿತಿ ಆಯ್ಕೆ ಮಾಡಿದವರು ಮಾತ್ರ ಪಕ್ಷದ ಅಭ್ಯರ್ಥಿಗಳಾಗುತ್ತಾರೆ, ತಾವೇ ಪಕ್ಷದ ಹೆಸರು ಹೇಳಿಕೊಂಡು ಸ್ಪರ್ಧಿಸುವಂತಿಲ್ಲ ಎಂದು ಸೂಚಿಸಿದ್ದಾರೆ. ಅಭ್ಯರ್ಥಿಗಳು ಮೀಸಲಾತಿಗನುಗುಣವಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದಿದ್ದಾರೆ. ಮೀಸಲಾತಿ ಪಟ್ಟಿ- 1ನೇ ವಾರ್ಡ್ ಪರಿಶಿಷ್ಟ ಪಂಗಡ (ಮಹಿಳೆ), 2ನೇ ವಾರ್ಡ್ ಸಾಮಾನ್ಯ, 3ನೇ ವಾರ್ಡ್ ಹಿಂದುಳಿದ ವರ್ಗ ಎ (ಮಹಿಳೆ), 4ನೇ ವಾರ್ಡ್ ಹಿಂದುಳಿದ ವರ್ಗ ಎ, 5 ನೇ ವಾರ್ಡ್ ಸಾಮಾನ್ಯ, 6 ನೇ ವಾರ್ಡ್ ಹಿಂದುಳಿದ ವರ್ಗ ಬಿ, 7ನೇ ವಾರ್ಡ್ ಸಾಮಾನ್ಯ, 8ನೇ ವಾರ್ಡ್ ಸಾಮಾನ್ಯ (ಮಹಿಳೆ), 9ನೇ ವಾರ್ಡ್ ಸಾಮಾನ್ಯ (ಮಹಿಳೆ), 10ನೇ ವಾರ್ಡ್ ಹಿಂದುಳಿದ ವರ್ಗ ಎ, 11ನೇ ವಾರ್ಡ್ ಪರಿಶಿಷ್ಟ ಜಾತಿ (ಮಹಿಳೆ) ಎಂದು ಘೋಷಣೆಯಾಗಿದೆ.