ಸೊರಬ: ಬೇರೆ ಭಾಷೆ ಹೇರಿಕೆಯಿಂದ ಅನೇಕ ಪ್ರಾದೇಶಿಕ ಭಾಷೆಗಳು ನಾಶವಾಗುವ ಸಂಭವ ಇದೆ. ಯಾವುದೇ ರಾಜ್ಯದ ಮೇಲೆ ಭಾಷೆಯ ಹೇರಿಕೆ ಸಲ್ಲದು. ಇದರಿಂದಾಗಿ ಲಿಪಿ ಇಲ್ಲದ ಬುಡಕಟ್ಟು ಭಾಷೆಗಳ ನಾಶಕ್ಕೆ ದಾರಿಯಾಗುತ್ತದೆ.
ಇತ್ತೀಚೆಗೆ ಕೇಂದ್ರ ಸರಕಾರ ಹಿಂದಿ ಭಾಷೆ ಹೇರಿಕೆ ಮಾಡಿರುವುದು ಉತ್ತರಕ್ಕೆ ಮಾತ್ರ ಸೀಮಿತ, ದಕ್ಷಿಣಕ್ಕೆ ಅನ್ವಯಿಸುವುದಿಲ್ಲ ಎಂಬ ಹೇಳಿಕೆ ಮುಂದೊಂದು ದಿನ ಗಂಡಾಂತರ ತರಬಲ್ಲದು ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಸಾಹಿತಿ ಕುಂ.ವೀರಭದ್ರಪ್ಪ ಹೇಳಿದರು.
ಪಟ್ಟಣದ ಎಪಿಎಂಸಿ ಪ್ರಾಂಗಣದ ಪಂಡಿತ್ ನಾರಾಯಣಪ್ಪ ವೇದಿಕೆಯಲ್ಲಿ ನಡೆದ ತೃತೀಯ ತಾಲೂಕು ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಕಥೆ, ಕವನ, ಕಾದಂಬರಿ ಬರೆಯುವುದಷ್ಟೇ ಸಾಹಿತ್ಯವಲ್ಲ. ರೈತರ ಆತ್ಮ ಹತ್ಯೆ, ಮಹಿಳೆ ಮೇಲಿನ ದೌರ್ಜನ್ಯ, ಸಮಾಜದಲ್ಲಿನ ಮೂಢನಂಬಿಕೆಗಳನ್ನು ತಡೆಗಟ್ಟುವುದರೊಂದಿಗೆ ದೇಶ - ಭಾಷೆ ರಕ್ಷಣೆ ಮಾಡುವ ಪ್ರಯತ್ನವೂ ಕೂಡ ಸಾಹಿತ್ಯ ಎನಿಸಿಕೊಳ್ಳುತ್ತದೆ. ಯುವಕರಲ್ಲಿ ದೇಶ, ಭಾಷೆ ಬಗ್ಗೆ ಜಾಗೃತಿ ಮೂಡಿದಾಗ ಮಾತ್ರ ನಾಡು, ಸಂಸ್ಕೃತಿ ಮೆರೆಯಬಲ್ಲದು.
ಕನ್ನಡ ನುಡಿಯಲ್ಲಿ ನಗೆ, ಮಂದಹಾಸ, ಅಳು, ನಗು, ಆನಂದ, ಆರೋಗ್ಯ ಹೀಗೆ ಎಲ್ಲ ಆಯಾಮಗಳಿದ್ದು, ಕನ್ನಡಕ್ಕೆ ಮನುಷ್ಯ ಸಂಬಂಧಗಳನ್ನು ಬೆಸೆಯುವಂತಹಾ ಶಕ್ತಿ ಇದೆ. ಕನ್ನಡ ಕೃತಿಗಳನ್ನು ನಿರಂತರವಾಗಿ ಅಧ್ಯಯನ ಮಾಡಿದಲ್ಲಿ ರೋಗಗಳನ್ನು ಕೂಡ ದೂರ ಇಡಲು ಸಾಧ್ಯ ಎಂಬುದನ್ನು ಮರೆಯಬೇಡಿ ಎಂದರು.
ಸೊರಬ ಸಂಸ್ಕೃತಿ, ಪರಂಪರೆಗೆ ಹೆಸರಾಗಿದ್ದು, ಇಲ್ಲಿನ ಶ್ರೀಗಂಧದ ಗುಡಿಗಾರಿಕೆ, ಭೂ ಸುಧಾರಣೆ ಹೋರಾಟ ಮಾಡುವುದರೊಂದಿಗೆ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ತಮ್ಮ ಆಡಳಿತಾವಧಿಯಲ್ಲಿ ಗ್ರಾಮೀಣ ಕೃಪಾಂಕದ ಮೂಲಕ ಗ್ರಾಮಾಂತರ ಪ್ರದೇಶದ ಮಕ್ಕಳ ಭವಿಷ್ಯಕ್ಕೆ ನೀಡಿದ ಕಾಳಜಿ ಹಾಗೂ ಭೂ ದಾನದ ಮೂಲಕ ನೂರಾರು ಎಕರೆ ಭೂಮಿ ದಾನ ಮಾಡಿ ತಮ್ಮ ಹೆಸರನ್ನು ಸಾರ್ಥಕ ಪಡಿಸಿಕೊಂಡ ಸರ್ದಾರ್ ಎಣ್ಣೆಕೊಪ್ಪ ಮಲ್ಲಿಕಾರ್ಜುನಪ್ಪ ಗೌಡರ ಶ್ರಮ ಅವಿಸ್ಮರಣೀಯ ಎಂದರು.