ತೀರ್ಥಹಳ್ಳಿ: ಮಲೆನಾಡಿನಲ್ಲಿ ಮಳೆಯ ಭೋರ್ಗರೆತ ಮುಂದುವರಿದಿದೆ. ಸೋಮವಾರ ದಾಖಲೆ ಪ್ರಮಾಣದಲ್ಲಿ ಮಳೆ ಸುರಿದಿದ್ದು, ಅನೇಕ ಕಡೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಅನೇಕ ಕಡೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿರುವುದರಿಂದ ತೀರ್ಥಹಳ್ಳಿ ತಾಲೂಕಿನ ಬಹುತೇಕ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆ ಘೋಷಿಸಲಾಗಿತ್ತು. ಸೋಮವಾರ ತಡ ರಾತ್ರಿ, ಮಂಗಳವಾರ ಮುಂಜಾನೆ ಮಳೆಯ ಅಬ್ಬರ ಹೆಚ್ಚಾದರೆ ಮಂಗಳವಾರವೂ ಶಾಲೆಗೆ ರಜೆ ಘೋಷಿಸುವ ಸಾಧ್ಯತೆ ಇದೆ.
ಶಿವಮೊಗ್ಗ- ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿಯ ಮೇಲೆ ಒಂದು ಅಡಿಯಷ್ಟು ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಕೊಂಚ ಅಡಚಣೆಯಾಯಿತು. ಭಾರೀ ವಾಹನಗಳು ಹಾಗೆ ಸಂಚರಿಸಿದರೆ ಸಣ್ಣ ಪುಟ್ಟ ವಾಹನ ಚಾಲಕರು ಪರದಾಡಬೇಕಾಯಿತು