ಏನೂ ಆಗಲ್ಲ ಬಿಡ್ರಿ ಅನ್ನೋ ಮನೋಭಾವನೆ ಬೇಡ: ಸಿಎನ್ಆರ್ ರಾವ್ ಪ್ರತಿಪಾದನೆ
ತುಮಕೂರು: ಏ, ಏನೂ ಆಗಲ್ಲ ಬಿಡ್ರಿ ಅನ್ನೋ ಭಾವನೆ ಬೇಡ. ದೇಶದ ಯುವಜನತೆ ಸಕಾರಾತ್ಮಕವಾಗಿ ಚಿಂತಿಸುವುದು ಅತ್ಯಗತ್ಯ ಎಂದು ಖ್ಯಾತ ವಿಜ್ಞಾನಿ ಪ್ರೊ. ಸಿಎನ್ಆರ್ ರಾವ್ ಬಲವಾಗಿ ಪ್ರತಿಪಾದಿಸಿದರು.
ಅವರು ತುಮಕೂರು ವಿವಿಯಲ್ಲಿ ಏರ್ಪಾಟಾಗಿದ್ದ ಅಭಿನಂದನಾ ಸಮಾರಂಭದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ದೇಶದ ಯುವಜನತೆ ಭಾರೀ ಸಿನಿಕರಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ ಸಿಎನ್ಆರ್ ರಾವ್, ವಿವಿಧ ಕ್ಷೇತ್ರಗಳಲ್ಲಿ ಯುವಜನತೆ ನಿರಾಸಕ್ತಿ ತೋರುತ್ತಿದ್ದಾರೆ. ದೇಶದ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ. ದೇಶದ ಬಗ್ಗೆ ನಿರಾಸಕ್ತಿ ತೋರಿ, ದೇಶವನ್ನೇ ದೂರುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು. ಬದಲಾವಣೆ ಸಾಧ್ಯವೇ ಇಲ್ಲ ಎಂಬ ಮನೋಸ್ಥಿತಿಯತ್ತ ಸಾಗಿದ್ದಾರೆ ಎಂದು ವಿಷಾದಿಸಿದರು. ಇಡೀ ವಿಶ್ವದಲ್ಲೇ ನಾವು ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸಬೇಕಾಗಿದೆ. ಈ ಹಿನ್ನೆಲೆಯಲ್ಲಿ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕಿದೆ. ಸವಲತ್ತು ಪಡೆಯಲು ತುಂಬಾ ಸ್ಪರ್ಧೆಯಿದೆ ಎಂದರು.
ಚೀನಾ ಅನುಭವ: ತಾವು ಚೀನಾಕ್ಕೆ ಭೇಟಿ ನೀಡಿದ ವೇಳೆ ಪ್ರತಿಯೊಬ್ಬ ನಾಗರಿಕ ತಾವು ಚೀನಿ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದರು. ಆದರೆ ಭಾರತೀಯರಲ್ಲಿ ಆ ಮನೋಭಾವನೆ ಇಲ್ಲ. ಭಾರತೀಯರು ಎಂದು ಹೇಳಿಕೊಳ್ಳಲು ನಾಚಿಕೆಪಟ್ಟುಕೊಳ್ಳಬಾರದು. ಯುವಜನತೆ ಭಾರತ ದೊಡ್ಡ ಹೆಸರು ಗಳಿಸಲು ಶ್ರಮಿಸಬೇಕು. ಈ ನಿಟ್ಟಿನಲ್ಲಿ ತೀರ್ಮಾನಿಸುವಂತೆ ಕರೆ ನೀಡಿದರು.
ಪರೀಕ್ಷಾ ಪದ್ಧತಿ ಬದಲಾಗಬೇಕು : ದೇಶದ ಪರೀಕ್ಷಾ ಪದ್ದತಿ ಅಮೂಲಾಗ್ರವಾಗಿ ಬದಲಾಗಬೇಕು. ಹಾಲಿ ಪರೀಕ್ಷಾ ಪದ್ಧತಿ ನಿಜವಾದ ಸಾಮರ್ಥ್ಯದ ಪರೀಕ್ಷೆಯ ಒರೆಗಲ್ಲಲ್ಲ. ಹಾಲಿ ಪರೀಕ್ಷೆಗಳು ಕೇವಲ ತೋರಿಕೆಯ ಪರೀಕ್ಷೆಗಳಾಗಿ ಹೋಗಿವೆ. ಪರೀಕ್ಷಾ ಪದ್ಧತಿ ಬದಲಾಗದೆ ದೇಶ ಬಲಿಷ್ಠವಾಗಲು ಸಾಧ್ಯವಿಲ್ಲ ಎಂದರು.
ಮುಂದಿನ 20 ವರ್ಷಗಳಲ್ಲಿ ಶೇ. 60 ರಷ್ಟು ಮಂದಿ 25 ವರ್ಷಗಳ ಒಳಗಿನ ಯುವಜನತೆ ಇರುತ್ತಾರೆ. ಈ ಶೇ. 60 ರಷ್ಟು ಯುವ ಜನತೆಗೆ ವಿದ್ಯಾಭ್ಯಾಸ, ಉದ್ಯೋಗವಕಾಶಗಳು ಎಲ್ಲಿವೆ ಎಂಬುದರ ಕುರಿತು ಈಗಲೇ ಚಿಂತಿಸಿ ಕಾರ್ಯೋನ್ಮುಖರಾಗಬೇಕು ಎಂದರು.
ಆರ್ಥಿಕವಾಗಿ ಸದೃಡವಾಗುತ್ತಿದೆ: ದೇಶ ಆರ್ಥಿಕವಾಗಿ ಸಧೃಡವಾಗುತ್ತಿದೆ. ಸೇನೆ ಕೂಡ ಬಲಿಷ್ಟವಾಗುತ್ತಿದೆ. ಆದರೆ ದೇಶದ ಯುವಜನಾಂಗ ಅಭಿವೃದ್ಧಿಗೆ ಸಹಕರಿಸುತ್ತಿಲ್ಲ. ಯುವಜನಾಂಗ ನಿರಾಸಕ್ತರಾಗುತ್ತಿದ್ದಾರೆ ಎಂದು ಸಿಎನ್ಆರ್ ವಿಷಾದಿಸಿದರು.