ಕವಿತ್ವವನ್ನು ಕಾವ್ಯದ ಮೋಹದಿಂದ ಬಿಡಿಸಿ
ಕ.ಪ್ರ. ವಾರ್ತೆ ತಿಪಟೂರು ಏ.2
ದೇವತೆಗಳನ್ನು ಮನುಷ್ಯರಂತೆ ಚಿತ್ರಿಸುವುದನ್ನು ಪಾಶ್ಚಾತ್ಯ ವಿಚಾರವಾದಿಗಳು ಒಪ್ಪಿಲ್ಲದ ಕಾರಣ ಕಾವ್ಯ ವಿರೋಧಿ ನೆಲೆ ರೂಪುಗೊಂಡಿತು. ಇದರ ಪರಿಣಾಮವಾಗಿ ನನ್ನ ಆದರ್ಶ ರಾಜ್ಯದಲ್ಲಿ ಕವಿಗಳಿಗೆ ಸ್ಥಾನವಿಲ್ಲ ಎಂದ ಪ್ಲೇಟೋನ ಅಭಿಪ್ರಾಯವನ್ನು ಇಂದು ನಾವೆಲ್ಲರೂ ಸಮರ್ಥಿಸಿಕೊಂಡು ಕವಿತ್ವವನ್ನು ಕಾವ್ಯದ ಮೋಹದಿಂದ ಬಿಡಿಸಿಕೊಳ್ಳಬೇಕು. ಇಲ್ಲವಾದರೆ ಅಪಾಯ ಖಚಿತ ಎಂದು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಶ್ರೀ ಸಿ.ಎಂ.ಮಾಮನಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಚಂದ್ರಶೇಖರ ನಂಗಲಿ ಅಭಿಪ್ರಾಯಪಟ್ಟರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ನುಡಿ ಮಂಟಪ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ಪಾಶ್ಚಾತ್ಯ ವಿಮರ್ಶೆಯ ಪ್ರಾಚೀನ ಪರಂಪರೆಯ ಪ್ರವರ್ತಕರು ಎಂಬ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು ಕಾವ್ಯವು ಭೋದನಾಮೃತವಾಗಿ ತನ್ನೊಳಗಿನ ಆಂತರ್ಯವನ್ನು ಶುಚಿಗೊಳಿಸುವ ಕೃತಕ ಬೀಜವಾಗಬೇಕು. ನಮ್ಮ ಅಳತೆಯನ್ನು ಮೀರಲಾರದ ಕಾವ್ಯ ಯಾವಾಗಲೂ ಜೀವಂತವಾಗಿರುತ್ತದೆ. ಸಾಹಿತ್ಯವನ್ನು ಭಿನ್ನತೆ, ವಿಭಜನೆ, ಭಾಗಮಾಡಿ ನೋಡದೆ ಪೂರ್ಣ ದೃಷ್ಟಿಯಿಂದ ಗ್ರಹಿಸಿದರೆ ಸುಲಭವಾಗಿ ತಾತ್ವಿಕ ನೆಲೆಗಳು ಅರ್ಥವಾಗುತ್ತವೆ. ಪಾಶ್ಚಾತ್ಯ ಪೌರಾತ್ಯ ಎಂದು ಭೇದ ಎಣಿಸದೆ ಏಕಮುಖವಾಗಿ ನೋಡುವ ಕ್ರಮ ನಮ್ಮದಾಗಬೇಕು. ತತ್ವಶಾಸ್ತ್ರ ಮತ್ತು ಕಾವ್ಯಗಳ ನಡುವೆ ನಿಕಟವಾದ ಸಂಬಂಧವಿದ್ದು, ಈ ಕಾರಣದಿಂದಲೇ ಚಿಂತಕ ಲೋಹಿಯಾರವರು ಭಗವದ್ಗೀತೆಯ ತತ್ವವನ್ನು ಕಾವ್ಯವನ್ನಾಗಿ ಮಾಡಿದ ಏಕೈಕ ನಿದರ್ಶನವಿದೆ.
ಆದರೆ ಲೋಹಿಯಾರವರು 12ನೇ ಶತಮಾನದ ಅಲ್ಲಮನನ್ನು ಅಧ್ಯಯನ ಮಾಡಿದ್ದರೆ ಈ ರೀತಿ ಹೇಳುತ್ತಿರಲಿಲ್ಲ ಎಂದು ಎನಿಸುತ್ತದೆ ಎಂದರು.
ನಮ್ಮೆಲ್ಲರ ಜವಾಬ್ದಾರಿ: ಪ್ರಾಂಶುಪಾಲರಾದ ಡಾ.ಜಯದೇವಪ್ಪ ಮಾತನಾಡಿ ಕನ್ನಡ ಭಾಷೆಗೆ ಹೆಚ್ಚು ಆದ್ಯತೆ ನೀಡುವ ಮೂಲಕ ನೆಲ, ಜಲ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮೈಮನಸ್ಸುಗಳನ್ನು ಸ್ವಚ್ಛವಾಗಿಟ್ಟುಕೊಂಡು ತಮ್ಮ ವ್ಯಕ್ತಿತ್ವಗಳನ್ನು ರೂಪಿಸಿಕೊಳ್ಳಬೇಕು ಎಂದರಲ್ಲದೆ ಕನ್ನಡ ವಿಭಾಗದ ವತಿಯಿಂದ ಇಂತಹ ಕಾರ್ಯಕ್ರವನ್ನು ಹಮ್ಮಿಕೊಂಡಿರುವುದ ಶ್ಲಾಘನೀಯ. ಈ ಕಾರ್ಯಕ್ರಮ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಬೆಳೆಯಲಿ ಎಂದು ಆಶಿಸಿದರು.
ಪ್ರಯೋಜನ ಪಡೆಯಲಿ: ಪ್ರಾಸ್ತಾವಿಕ ನುಡಿಗಳನ್ನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಪಿ. ಯಶೋಧ, ಪ್ರತಿ ವರ್ಷದಂತೆ ಈ ರ್ವಷವೂ ಸಹ ನುಡಿ ಮಂಟಪ ವೇದಿಕೆಯಿಂದ ಕಾರ್ಯಕ್ರಮ ಆಯೋಜಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಪಠ್ಯ ಪುಸ್ತಕಗಳಿಗೇ ಸಮೀತವಾಗದೆ ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇದರ ಪ್ರಯೋಜನ ಪಡೆದು, ಹೆಚ್ಚು ಜ್ಞಾನ ಸಂಪಾದಿಸಬೇಕೆಂದರು.
ಕಸಾಪ ತಾ.ಅಧ್ಯಕ್ಷರಾದ ಉಜ್ಜಜ್ಜಿ ರಾಜಣ್ಣ ಮತ್ತು ಉಪನ್ಯಾಸಕರಾದ ಕೃಷ್ಣಮೂರ್ತಿ ಬಿಳಿಗೆರೆಯವರು ಮಾತನಾಡಿದರು. ಜಾನಪದ ಕಲಾವಿದರಾದ ನಾಗಣ್ಣ ಮತ್ತು ಕೆಂಪೇಗೌಡ ಅವರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಡಾ.ಎಲ್.ಎಂ. ವೆಂಕಟೇಶ್, ಯೋಗೀಶ್, ರಮೇಶ್, ಪುಷ್ಪಾವತಿ, ರವಿಶಂಕರ್, ಸುರೇಶ್, ಜಗದಾಂಬ, ಡಾ.ಹೊನ್ನಾಂಜನಯ್ಯ ಮತ್ತಿತರರಿದ್ದರು. ಯಮುನ ಪ್ರಾರ್ಥಿಸಿ, ಗಂಗಾಧರ್ ಸ್ವಾಗತಿಸಿ, ಭೈರೇಶ್ ನಿರೂಪಿಸಿ, ಪೃಥ್ವಿ ವಂದಿಸಿದರು.