ಬರಡು ಕೆರೆಯಲ್ಲಿ ಬೀಡುಬಿಟ್ಟಿರುವ ಆನೆಗಳು: ದ್ವಿಚಕ್ರ ವಾಹನ ಧ್ವಂಸ
ಕ.ಪ್ರ. ವಾರ್ತೆ ತುರುವೇಕೆರೆ ಏ.2-
ಎಲ್ಲಿ ನೋಡಿದರೂ ಗುಂಡಿಗೊಟರು. ಒಣಗಿರುವ ಕುರುಚಲು ಗಿಡಗಳು, ಹನಿ ನೀರೂ ಸಹ ಇಲ್ಲದ ಕೆರೆ ಅದು. ಆದರೂ ಸಹ ಆಹಾರ ಹುಡುಕಿ ಬಂದ 3 ಆನೆಗಳು ಆ ಕೆರೆಯ ಮಧ್ಯದಲ್ಲಿ ನಿಂತಿವೆ.
ಇದು ತಾಲೂಕಿನ ದಬ್ಬೇಘಟ್ಟ ಹೋಬಳಿಯ ಗೊಟ್ಟೀಕೆರೆ ಕೆರೆಯಲ್ಲಿ ಕಂಡು ಬಂದಿರುವ ಆನೆಗಳ ದೃಶ್ಯ. ಬೆಳಗ್ಗೆ 8.30ಕ್ಕೆ ಬಿಗನೇನಹಳ್ಳಿಯ ಗಂಗಾಧರ್ ಎಂಬುವವರು ತಮ್ಮ ಜಮೀನಿನತ್ತ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದರು. ಎದುರು ಬಂದ ಆನೆಗಳನ್ನು ಕಂಡ ಗಂಗಾಧರ್ ದ್ವಿಚಕ್ರವಾಹನವನ್ನು ಬಿಟ್ಟು ಪರಾರಿಯಾಗಿದ್ದಾರೆ. ವಾಹನ ಕಂಡ ಆನೆ ಸೊಂಡಲಿನಲ್ಲಿ ವಾಹನವನ್ನು ಎತ್ತಿ ಬಿಸಾಕಿದೆ.
ಪರಿಣಾಮ ವಾಹನ ಬಹುಪಾಲು ಜಖಂಗೊಂಡಿದೆ. ಕೆಲವೇ ದೂರದಲ್ಲಿದ್ದ ಗಂಗಾಧರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದಾರಿ ಮಧ್ಯೆದ ಬೇವಿನಹಳ್ಳಿಯ ತೋಟದ ಮನೆಯಲ್ಲಿದ್ದ ನೀರಿನತೊಟ್ಟಿಯಲ್ಲಿ ನೀರು ಕುಡಿದ ಆನೆಗಳು ತೊಟ್ಟಿಯನ್ನು ಜಖಂಗೊಳಿಸಿವೆ.
ಸ್ಥಳಕ್ಕೆ ಆಗಮಿಸಿದ್ದ ಚನ್ನರಾಯಪಟ್ನ ಅರಣ್ಯ ಇಲಾಖಾ ಅಧಿಕಾರಿ ಧರ್ಮಪ್ಪ ಮಾತನಾಡಿ ಕಳೆದ ದಿನ ಅಣತಿ ಕೆರೆಯಲ್ಲಿದ್ದ ಆನೆಗಳು ಗೊಟ್ಟೀಕೆರೆ ತಲುಪಿವೆ. ಬಹುಶಃ ನಾಳೆ ಅವನ್ನು ಹಾಸನ ಕಾಡಿನತ್ತ ಕಳಿಸಲಾಗುವುದು ಎಂದು ಹೇಳಿದರು.
ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು. ರಾತ್ರಿ ವೇಳೆ ಸಂಚಾರ ಮಾಡುವಾಗ ಎಚ್ಚರದಿಂದಿರಬೇಕು ಎಂದು ಹೇಳಿದ್ದಾರೆ.