6 ಕ್ಕೆ ತುರುವೇಕೆರೆಯಲ್ಲಿ ಶ್ರೀನಿವಾಸ ಕಲ್ಯಾಣ
ಕನ್ನಡಪ್ರಭ ವಾರ್ತೆ, ತುಮಕೂರು, ಏ.3
ಬರಗಾಲ ನಿವಾರಣೆಗೆ ಸಿನಿಮಾ ನಿರ್ಮಾಪಕ ಕೆ. ಮಂಜು ಅವರು ಏ. 6 ರಂದು ತುರುವೇಕೆರೆಯಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ಏರ್ಪಡಿಸಿದ್ದಾರೆ.
ಅಂದು ಮಧ್ಯಾಹ್ನ 3 ಗಂಟೆಯಿಂದ ಸಕಲ ಪೂಜಾ ವಿಧಿ ವಿಧಾನಗಳೊಂದಿಗೆ ಬೇಟೆರಾಯ ಸ್ವಾಮಿ ದೇವಾಲಯದಿಂದ ಪ್ರಮುಖ ರಾಜಬೀದಿಗಳಲ್ಲಿ ಭವ್ಯ ಮೆರವಣಿಗೆಯೊಂದಿಗೆ ಆರಂಭವಾಗುವುದು. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ತಾಲೂಕಿನ ಭಕ್ತಾದಿಗಳು ಪಾಲ್ಗೊಂಡು ಉತ್ತಮ ಮಳೆ ಬೆಳೆಗಾಗಿ ಪ್ರಾರ್ಥಿಸಿ ವೆಂಕಟೇಶ್ವರನ ದರ್ಶನ ಭಾಗ್ಯ ಪಡೆಯಬೇಕು ಎಂದು ತಿಳಿಸಿದ್ದಾರೆ. ತಾವೊಬ್ಬ ತುರುವೇಕೆರೆ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ನಿಜ. ಆದರೆ ಈ ಶ್ರೀನಿವಾಸ ಕಲ್ಯಾಣ ಮಹೋತ್ಸವಕ್ಕೂ ಚುನಾವಣೆಗೂ ಯಾವುದೇ ಸಂಬಂಧವಿಲ್ಲ. ಟಿಕೆಟ್ ಪಡೆಯಲು ತಾವು ಯಾರಿಗೂ ಹಣ ನೀಡಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇದು ರಾಜಕೀಯ ಪ್ರದರ್ಶನದ ಕಾರ್ಯಕ್ರಮವಲ್ಲ. ಜತೆಗೆ ಇಲ್ಲಿ ಯಾವುದೇ ಊಟ, ಉಪಹಾರಕ್ಕೂ ಅವಕಾಶವಿಲ್ಲ. ತಾಲೂಕಿನ ಜನತೆಗೆ ಒಳ್ಳೆಯದಾಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.