ಕಾಂಗ್ರೆಸ್‌ನಲ್ಲಿ ದುಡಿದವರಿಗೆ ಅನ್ಯಾಯ: ಇಂದು ಪ್ರತಿಭಟನೆ
ತುರುವೇಕೆರೆ: ಕಾಂಗ್ರೆಸ್ ಪಕ್ಷಕ್ಕೆ ಹತ್ತಾರು ವರ್ಷಗಳ ಕಾಲ ಹೋರಾಟ ಮಾಡಿ ಪಕ್ಷದ ಅಭಿವೃದ್ಧಿಗೆ ಶ್ರಮಿಸಿದವರನ್ನು ಕಡೆಗಣಿಸಿ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆಯದೇ ಇರುವವರಿಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಲು ಮುಂದಾಗಿರುವ ಕ್ರಮವನ್ನು ಖಂಡಿಸಿ ಗುರುವಾರ ಬೆಳಗ್ಗೆ ಭಾರಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ ಹೆಚ್.ಬಿ.ನಂಜೇಗೌಡ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಕಾಂಗ್ರೆಸ್‌ನ ಉಪಾಧ್ಯಕ್ಷ ಚೌದ್ರಿ ಟಿ. ರಂಗಪ್ಪ ಹೇಳಿದ್ದಾರೆ.
ತುರ್ತು ಪತ್ರಿಕಾಗೋಷ್ಠಿ ಕರೆದ ನಾಯಕರು, ಪಕ್ಷಕ್ಕಾಗಿ ಹಗಲಿರುಳು ತನು ಮನ ಧನವನ್ನು ಧಾರೆ ಎರೆದು ಪಕ್ಷವನ್ನು ಕ್ಷೇತ್ರದಲ್ಲಿ ಕಟ್ಟಿದ ಹತ್ತಾರು ಮುಖಂಡರ ಮನವಿಯನ್ನು ಪರಿಗಣಿಸದ ಕಾಂಗ್ರೆಸ್ ಹೈಕಮಾಂಡ್ ಪಕ್ಷದ ಸದಸ್ಯತ್ವನ್ನೇ ಪಡೆಯದ ಕೆ.ಮಂಜು ಅವರಿಗೆ ಟಿಕೆಟ್ ನೀಡಲು ಮುಂದಾಗಿರುವುದು ದುರಂತವೇ ಸರಿ. ಪಕ್ಷ ನಿಷ್ಠೆ ತೋರಿದ ಮುಖಂಡರಿಗೆ ಅವವಾನ ಮಾಡಿದಂತಾಗಿದೆ. ಕ್ಷೇತ್ರದಲ್ಲಿ ಪಕ್ಷ ಕಳೆದ 20 ವರ್ಷಗಳಿಂದಲೂ ಸಂಪೂರ್ಣವಾಗಿ ನೆಲಕಚ್ಚಿತ್ತು. ಆದರೆ ಎಲ್ಲಾ ನಾಯಕರ ಪರಿಶ್ರಮದಿಂದ ಪಕ್ಷ ಇಂದು ಕ್ಷೇತ್ರದಲ್ಲಿ ಗೆಲವು ಕಾಣುವ ಹಂತವನ್ನು ತಲುಪಿದೆ. ಆದರೆ ಕಾಂಗ್ರೆಸ್ ಹೈಕಮಾಂಡ್ ಕ್ಷೇತ್ರದಲ್ಲಿ ಜನರಿಗಾಗಲೀ ಅಥವಾ ಪಕ್ಷದ ಕಾರ್ಯಕರ್ತರ ಪರಿಚಯವೇ ಇಲ್ಲದ ವ್ಯಕ್ತಿಗಳಿಗೆ ಟಿಕೇಟ್ ನೀಡಲು ಮುಂದಾಗಿದೆ ಎಂದರು.