ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಣಿಗಲ್: ಇನ್ನೂ ರಾರಾಜಿಸುತ್ತಿವೆ ಭಿತ್ತಿಪತ್ರ

Rashmi Kasaragodu
Updated On : 4 Apr 2013, 12:17 pm

ಕನ್ನಡಪ್ರಭವಾರ್ತೆ, ಕುಣಿಗಲ್, ಏ, 3
ಒಂದೆಡೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸರ್ಕಾರದ ಜಾಹಿರಾತು ಫಲಕ ತೆರವುಗೊಳ್ಳದೆ, ಮತ್ತೊಂದೆಡೆ ತಾಲೂಕಿನ ವಿವಿಧೆಡೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಕಳೆದ ಶಿವರಾತ್ರಿ ಹಬ್ಬಾಚರಣೆ ಪ್ರಯುಕ್ತ ಶುಭಕೋರುವ ಭಿತ್ತಿಪತ್ರ ರಾರಾಜಿಸುತ್ತಾ ನೀತಿ ಸಂಹಿತೆ ಪಾಲನೆ ತಾಲೂಕಿನಲ್ಲಿ ಎಷ್ಟರ ಮಟ್ಟಿಗೆ ಆಗುತ್ತಿದೆ ಎಂಬ ಅನುಮಾನ ಮೂಡಿಸುತ್ತಿದೆ ಎಂದು ಪ್ರಜ್ಞಾವಂತ ಮತದಾರರು ಪ್ರಶ್ನಿಸಿದ್ದಾರೆ.
ವಿಧಾನಸಭೆ ಚುನಾವಣೆಗಳು ಘೋಷಣೆಯಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಜಾಹಿರಾತು ಫಲಕ, ಸರ್ಕಾರದ ಕಾರ್ಯಕ್ರಮಗಳ ಫಲಕವನ್ನು ಸಾರ್ವಜನಿಕ ಸ್ಥಳದಿಂದ ತೆರವುಗೊಳಿಸಬೇಕಾದ ನಿಯಮ ಇದ್ದರೂ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮುಂಭಾಗದಲ್ಲಿ ಸಕಾಲ ಯೋಜನೆ ಜಾರಿಗೆ ತಂದಿರುವ ಬಿಜೆಪಿ ಸರ್ಕಾರದ ಸಾಧನೆ ಮತ್ತು ಮುಖ್ಯಮಂತ್ರಿ, ಕಾನೂನು ಸಂಸದೀಯ ಸಚಿವರ ಭಾವಚಿತ್ರ ರಾರಾಜಿಸುತ್ತಿದೆ. ಇದರ ಪಕ್ಕವೇ ಬಿಎಎಸ್‌ಆರ್ ಕಾಂಗ್ರೆಸ್ ಮುಖಂಡರಾದ ಪೂಜಾಗಾಂಧಿ ಭಾವಚಿತ್ರವಿರುವ ಆರೋಗ್ಯ ಇಲಾಖೆ ಕಾರ್ಯಕ್ರಮದ ಭಾವಚಿತ್ರ ರಾರಾಜಿಸುತ್ತಾ, ದಿನಂಪ್ರತಿ ಆಸ್ಪತ್ರೆಗೆ ಆಗಮಿಸುವ, ಹೆದ್ದಾರಿಯಲ್ಲಿ ಸಂಚರಿಸುವ ನೂರಾರು ಮತದಾರರ ಗಮನ ಸಳೆಯುತ್ತಿದೆ.
ಪ್ರಶ್ನಿಸುವಂತಾಗಿದೆ: ಇನ್ನು ಕಳೆದ ಸಂಕ್ರಾಂತಿ ಹಾಗೂ ಶಿವರಾತ್ರಿ ಹಬ್ಬಗಳಿಗೆ ವಿಧಾನಸಭೆ ಚುನಾವಣೆ ಮೇಲೆ ಕಣ್ಣಿಟ್ಟು ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು, ಮತದಾರರಿಗೆ ಶುಭಕೋರುವ ಭಿತ್ತಿಪತ್ರಗಳು ಅಯಕಟ್ಟಿನ ಜಾಗಗಳಲ್ಲಿ ರಾರಾಜಿಸುತ್ತಿದ್ದರೆ, ನೀತಿ ಸಂಹಿತೆ ಪಾಲನಾಧಿಕಾರಿಗಳ ನಿರ್ಲಕ್ಷ್ಯದಿಂದ ತೆರವುಗೊಳ್ಳದೆ ಸಾರ್ವಜನಿಕ ಪ್ರದೇಶದಲ್ಲಿ ರಾರಾಜಿಸುತ್ತಿವೆ. ವಿಧಾನಸಭಾ ಚುನಾವಣೆಗಳು ಘೋಷಣೆಯಾದ ಕೂಡಲೆ ತಾಲೂಕು ಕಚೇರಿ ಹಾಗೂ ಪಕ್ಕದ ತಾಲೂಕು ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಹಾಕಲಾಗಿದ್ದ ಬಿಜೆಪಿ ಸರ್ಕಾರದ ಸಾಧನೆ ಸಾರುವ ನಾಲ್ಕಕ್ಕೂ ಹೆಚ್ಚು ಪ್ರಚಾರ ಫಲಕಗಳನ್ನು ನೀತಿ ಸಂಹಿತೆ ನೆಪದಲ್ಲಿ ತೆಗೆದು ಹಾಕಲಾಗಿದ್ದರೆ, ಇನ್ನು ಕೆಲವೆಡೆ ಹಾಗೆ ಮುಂದುವರೆಯುತ್ತಾ ಚುನಾವಣೆ ನೀತಿ ಸಂಹಿತೆ ಪಾಲನೆಯನ್ನು ಪ್ರಶ್ನಿಸುವಂತಾಗಿದೆ.  
ಇದ್ದೂ ಇಲ್ಲದಂತಾಗಿದೆ: ಈ ಮಧ್ಯೆ ಪಟ್ಟಣದ ಮದ್ದೂರು ರಸ್ತೆ, ತುಮಕೂರು ರಸ್ತೆಯಲ್ಲಿನ ಕೆಲ ಮದ್ಯದಂಗಡಿಗಳಲ್ಲಿ ರಾಜರೋಷವಾಗಿ ಕೌಂಟರ್‌ಗಳ ಮೇಲೆ ಚಿಲ್ಲರೆ ಮದ್ಯ ಮಾರಾಟ ನಡೆಯುತ್ತಿದ್ದು, ಕೆಲ ಮದ್ಯದಂಗಡಿಗಳಿಗೆ
ಕೆಲ ಪಕ್ಷಗಳವರು ಇಂತಿಷ್ಟೆ ನೀಡುವಂತೆ ಮೊದಲೆ ಸೂಚಿಸಿರುವ ವದಂತಿಗಳು ದಟ್ಟವಾಗಿದ್ದು, ಆಮಿಷಕ್ಕೆ ಒಳಗಾದ ಮದ್ಯವ್ಯಸನಿ ಮತದಾರರು ಕೌಂಟರ್‌ಗಳ ಬಳಿಯೇ ಸೇವಿಸಿ ತೆರಳುತ್ತಿದ್ದು, ಅಬಕಾರಿ ಇಲಾಖೆ ಗಸ್ತು ಇದ್ದರೂ ಇಲ್ಲದಂತಾಗಿದೆ.
ಚುನಾವಣೆ ನೀತಿ ಸಂಹಿತೆ ಪಾಲನೆ ಕೇವಲ ನೆಪ ಮಾತ್ರಕ್ಕೆ ಎಂದು ಪ್ರಜ್ಞಾವಂತ ಮತದಾರರಾದ ಶ್ರೀನಿವಾಸ, ಕೆ.ರಮೇಶ, ರಂಗನಾಥ ಇತರರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ಶಿಸ್ತು,ನಿಯಮಬದ್ಧ, ಮುಕ್ತ ಹಾಗೂ ಪಾರದರ್ಶಕ ಚುನಾವಣೆ ನಡೆಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement