ಯಾರಿಗೆ ಒಲಿಯುತ್ತೆ ತುಮಕೂರು ಕ್ಷೇತ್ರ?
ಉಗಮ ಶ್ರೀನಿವಾಸ್
ತುಮಕೂರು: ಹಳೆ ಮೈಸೂರು ಭಾಗದ ಶಕ್ತಿಶಾಲೆ ಜಿಲ್ಲಾ ಕೇಂದ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ತುಮಕೂರು ವಿಧಾನಸಭೆ ಈ ಬಾರಿ ಯಾವ ಪಕ್ಷಕ್ಕೆ ಒಲಿಯುತ್ತದೆ ಎಂಬ ಚರ್ಚೆ ಆರಂಭವಾಗಿದೆ.
ಸತತ 4 ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಎರಡು ಬಾರಿ ಸಚಿವರೂ ಆಗಿರುವ ಸೊಗಡು ಶಿವಣ್ಣ ಅವರು ಈ ಬಾರಿಯೂ ಬಿಜೆಪಿ ಅಭ್ಯರ್ಥಿ. ನಾಲ್ಕು ಬಾರಿ ಗೆದ್ದು 2 ಬಾರಿ ಸಚಿವರಾಗಿದ ಅನುಭವ ಸೊಗಡು ಅವರ ನೆರವಿಗೆ ಬರಲಿದೆ.
ಇನ್ನು ಕೆಜೆಪಿಯಿಂದ ಸಂಸದ ಜಿ.ಎಸ್. ಬಸವರಾಜು ಅವರ ಪುತ್ರ ಜ್ಯೋತಿ ಗಣೇಶ್ ಅಭ್ಯರ್ಥಿ. ಇವರಿಗೆ ಇದು ಮೊದಲ ಚುನಾವಣೆಯಾದರೂ ನಾಲ್ಕು ಬಾರಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿ ರಾಜಕೀಯ ಪಟ್ಟುಗಳನ್ನು ಕಲಿತಿರುವ ಜಿ.ಎಸ್. ಬಸವರಾಜು ಬೆನ್ನಿಗಿರುವುದು ಇವರಿಗೆ ಆನೆಬಲ ಇದ್ದಂತೆ. ಈಗಾಗಲೇ ಜ್ಯೋತಿ ಗಣೇಶ್ ಕ್ಯಾಂಪೇನ್ ಆರಂಭಿಸಿದ್ದಾರೆ.
ಇನ್ನು ಕಾಂಗ್ರೆಸ್ನಿಂದ ರಫಿಕ್ ಅಹಮದ್ ಅವರು ಅಭ್ಯರ್ಥಿ. ಕಳೆದ ಚುನಾವಣೆಯಲ್ಲಿ ಸೊಗಡು ಶಿವಣ್ಣ ಅವರಿಗೆ ಸಮಬಲದ ಫೈಟ್ ನೀಡಿ ಕೇವಲ 1700 ಮತಗಳದಿಂದ ಪರಾಭವಗೊಂಡಿದ್ದರು.
ಇನ್ನು ಜೆಡಿಎಸ್ ಈವರೆಗೂ ಯಾರಿಗೆ ಟಿಕೆಟ್ ನೀಡಬೇಕೆಂಬ ಗೊಂದಲದಲ್ಲಿದೆ. ಈಗಾಗಲೇ ಜೆಡಿಎಸ್ನಿಂದ ಬೋರೇಗೌಡ, ನರಸೇಗೌಡ, ಎಂ.ಆರ್. ಹುಲಿನಾಯ್ಕರ್, ಮಿರ್ಜಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ.
ದಳಪತಿಗಳ ಕಥೆ ಏನು: ಹಿಂದುಳಿದ ವರ್ಗದ ಕುರುಬ ಜನಾಂಗಕ್ಕೆ ಸೇರಿರುವ ಹುಲಿನಾಯ್ಕರ್ ತಮಗೆ ಟಿಕೆಟ್ ಕೊಟ್ಟರೆ ಹಿಂದುಳಿದ ವರ್ಗದ ಓಟುಗಳು ಮತ್ತು ಒಕ್ಕಲಿಗರ ಮತಗಳು ಪಡೆದು ಗೆಲವು ನಮ್ಮದಾಗುತ್ತದೆ ಎಂಬುದು ಅವರ ಲೆಕ್ಕಾಚಾರ. ಆದರೆ ವಿಧಾನ ಪರಿಷತ್ನ ಅವಧಿ ಇನ್ನು 2 ವರ್ಷ ಇದೆ. ಹೀಗಾಗಿ ಬೇರೆಯವರಿಗೆ ಕೊಟ್ಟರೆ ಹೇಗೆ ಎಂಬ ಚರ್ಚೆಗಳು ಎದ್ದಿವೆ. ಇನ್ನು ಕಳೆದ ನಾಲ್ಕು ವರ್ಷಗಳಿಂದ ತುಮಕೂರಿನಲ್ಲಿ ಹಲವಾರು ಸಂಘಟನೆಗಳೊಂದಿಗೆ ಗುರುತಿಸಿಕೊಂಡಿರುವ ಬೋರೇಗೌಡ ಮತ್ತು ನರಸೇಗೌಡರು ಪ್ರಬಲ ಟಿಕೆಟ್ ಆಕಾಂಕ್ಷಿಗಳು. ಇಲ್ಲಿಯವರೆಗೆ ತುಮಕೂರು ವಿಧಾನಸಭೆ ಕ್ಷೇತ್ರದಲ್ಲಿ ಯಾವೊಬ್ಬ ಒಕ್ಕಲಿಗರಿಗೆ ಟಿಕೆಟ್ ನೀಡಿಲ್ಲ. ಹಾಗಾಗಿ ಈ ಬಾರಿ ಒಕ್ಕಲಿಗರಿಗೆ ಟಿಕೆಟ್ ನೀಡಿ ಎಂಬುದು ಇವರ ವಾದ.
ಲಿಂಗಾಯಿತ ಕೋಟಾದಲ್ಲಿ ಮಿರ್ಜಿಗೆ ಕೊಡಬೇಕು ಎಂಬುದು ಇನ್ನೊಂದು ಗುಂಪಿನ ವಾದ. ಹೀಗಾಗಿ ಜೆಡಿಎಸ್ ವರಿಷ್ಠರು ಯಾರಿಗೆ ಮಣೆ ಹಾಕುತ್ತಾರೆ ಎಂಬುದು ಸದ್ಯಕ್ಕಿರುವ ಕುತೂಹಲ.
ಎಲ್ಲಾ ನಾಲ್ಕು ಪಕ್ಷಗಳಲ್ಲಿ ಪ್ರಮುಖ ಅಭ್ಯರ್ಥಿಗಳೇ ಸ್ಪರ್ಧಿಸುವುದರಿಂದ ಈ ಬಾರಿ ತುಮಕೂರು ವಿಧಾನಸಭೆ ಚುನಾವಣೆಯಲ್ಲಿ ತುರುಸಿನ ಸ್ಪರ್ಧೆ ಏರ್ಪಡುವುದಂತೂ ಸತ್ಯ.
ಕೆಜೆಪಿ ಕಥೆ ಏನು ?
ನಾಲ್ಕು ಬಾರಿ ಸಂಸದರಾಗಿ ರಾಜಕೀಯ ಪಟ್ಟುಗಳನ್ನು ಕರಗತ ಮಾಡಿಕೊಂಡಿರುವ ಸಂಸದರ ಪುತ್ರ ಸ್ಪರ್ಧಿಸಿರುವುದು ಕೆಜೆಪಿಗೆ ಪ್ಲಸ್ ಪಾಯಿಂಟ್. ಕೆಜೆಪಿ ಈಗ ಲಿಂಗಾಯಿತ ಓಟ್ ಬ್ಯಾಂಕ್ ಅನ್ನೇ ನಂಬಿ ಕೂತಿದೆ. ಬಿಜೆಪಿ ಸಖ್ಯ ತೊರೆದು ಜಾತ್ಯತೀತ ತತ್ವದಡಿ ಕೆಜೆಪಿ ಕಟ್ಟಿರುವ ಘೋಷಣೆ ಮೊಳಗಿರುವುದರಿಂದ ದಲಿತರು, ಹಿಂದುಳಿದ ವರ್ಗಗಳ ಓಟು ಬೀಳುತ್ತದೆ ಎಂಬ ನಿರೀಕ್ಷೆಯಲ್ಲಿದೆ ಕೆಜೆಪಿ. ಅಲ್ಲದೇ ಸಂಸದ ಬಸವರಾಜು ಅವರು ಕಾಂಗ್ರೆಸ್ನಲ್ಲೂ, ಬಿಜೆಪಿಯಲ್ಲೂ ಒಳ್ಳೆಯ ಗೆಳೆಯರಿದ್ದಾರೆ. ಮತಗಳನ್ನು ಡಿವೈಡ್ ಮಾಡುವ ಕಲೆಯೂ ಗೊತ್ತಿದೆ. ಲಿಂಗಾಯಿತರ ಮತಗಳು ಮತ್ತು ಸಂಸದರ ಚಾಣಾಕ್ಷ ನಡೆಯನ್ನು ಕೆಜೆಪಿ ನೆಚ್ಚಿಕೊಂಡಿದೆ.
ಹೇಗಿದೆ ಬಿಜೆಪಿ ತಯಾರಿ
ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಸಾಧನೆ ಅಷ್ಟೆನೂ ಆಶಾದಾಯಕವಾಗಿಲ್ಲ. ಅದು ಗೆದ್ದಿರುವುದು ಕೇವಲ 3 ಕ್ಷೇತ್ರಗಳಲ್ಲಿ ಮಾತ್ರ. ಅಲ್ಲದೇ ಬಿಜೆಪಿ ಕಾರ್ಯಕರ್ತರು ಕೆಜೆಪಿಗೆ ವಲಸೆ ಹೋಗಿರುವುದರಿಂದ ಹೊಸ ಕಾರ್ಯಕರ್ತರನ್ನು ಹುಟ್ಟು ಹಾಕಬೇಕಾಗಿದೆ. ಈಗಲೂ ಬಿಜೆಪಿ ಬ್ರಾಹ್ಮಣ, ಲಿಂಗಾಯಿತ, ಜೈನರು, ಶೆಟ್ಟರು, ವಿಶ್ವಕರ್ಮ ಜನಾಂಗದ ಮತಗಳು ಸೇರಿದಂತೆ ಇತರೆ ಹಿಂದುಳಿದ ವರ್ಗಗಳ ಮತಗಳನ್ನು ನಂಬಿಕೊಂಡಿದೆ. ಯಡಿಯೂರಪ್ಪ ಕೆಜೆಪಿ ಕಟ್ಟಿದರೂ ನಿರೀಕ್ಷೆ ಮಟ್ಟದಷ್ಟು ಲಿಂಗಾಯಿತರು ಕೆಜೆಪಿಗೆ ಮತ ಹಾಕುವುದಿಲ್ಲ ಎಂಬ ನಂಬಿಕೆ ಬಿಜೆಪಿಯದ್ದಾಗಿದೆ.
ಕಾಂಗ್ರೆಸ್ ನಡೆ ಏನು ?
ಕೆಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿಗಳಿಬ್ಬರೂ ಲಿಂಗಾಯಿತ ಸಮುದಾಯಕ್ಕೆ ಸೇರಿದವರಾಗಿದ್ದು, ಅವರ ಮತಗಳು ವಿಭಜನೆಯಾಗುವುದರಿಂದ ನಮಗೆ ಅನುಕೂಲವಾಗಲಿದೆ ಎಂಬ ನಿರೀಕ್ಷೆಯಲ್ಲಿ ಕಾಂಗ್ರೆಸ್ ಇದೆ. ಅಲ್ಲದೇ ರಫೀಕ್ ಅಹಮದ್ ಸಭ್ಯರು ಎಂದೇ ಹೆಸರು ಮಾಡಿದ್ದಾರೆ. ಅಲ್ಲದೇ ಕಳೆದ ಚುನಾವಣೆಯಲ್ಲಿ ಅವರು ಸಾಕಷ್ಟು ಪೈಪೋಟಿ ನೀಡಿದ್ದರು. ಎಲ್ಲಕ್ಕೂ ಮಿಗಿಲಾಗಿ ತುಮಕೂರು ನಗರದಲ್ಲಿ ಗಣನೀಯ ಸಂಖ್ಯೆಯಲ್ಲಿ ಮುಸ್ಲಿಂ ಜನಾಂಗದವರು ಇರುವುದು ಕೂಡ ಇವರಿಗೆ ನೆರವಿಗೆ ಬರಲಿದೆ. ಈ ಬಾರಿಯ ನಗರಸಭೆ ಚುನಾವಣೆಯಲ್ಲೂ ಕೂಡ ಅದು ಗಣನೀಯ ಮತಗಳನ್ನು ಪಡೆದಿದೆ. ಎಲ್ಲಕ್ಕೂ ಮಿಗಿಲಾಗಿ ಕಾಂಗ್ರೆಸ್ ಪರ ಅಲೆ ಬೀಸುವ ನಿರೀಕ್ಷೆ ಕೂಡ ಅವರಿಗಿದೆ. ಇಷ್ಟೆಲ್ಲಾ ಇದ್ದರೂ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯ ಇಲ್ಲವೆಂದಲ್ಲ. ಈಗಾಗಲೇ ರಫೀಕ್ ಅಹಮದ್ ಗೆ ಟಿಕೆಟ್ ನೀಡಬಾರದೆಂದು ಪ್ರತಿಭಟನೆ ಸಹ ನಡೆದಿದೆ.