ಜೆಡಿಎಸ್ ಟಿಕೆಟ್ ಗೊಂದಲ ಪರಿಹರಿಸಲು ಪ್ರೊ. ರೇಣು ಒತ್ತಾಯ
ತಿಪಟೂರು: ತಿಪಟೂರು ತಾಲೂಕು ವಿಧಾನಸಭಾ ಜೆಡಿಎಸ್ ಅಭ್ಯರ್ಥಿ ಯಾರೆಂಬುದನ್ನು ಒಂದೆರಡು ದಿನಗಳಲ್ಲಿ ಪರಿಹರಿಸಲು ಜೆಡಿಎಸ್ ಜಿಲ್ಲಾ ಹಿರಿಯ ಉಪಾಧ್ಯಕ್ಷ ಪ್ರೊ. ಎಂ. ರೇಣುಕಾರ್ಯ ರಾಜ್ಯಾಧ್ಯಕ್ಷರಾದ ಕುಮಾರಸ್ವಾಮಿಯವರನ್ನು ಒತ್ತಾಯಿಸಿದ್ದಾರೆ.
ತಿಪಟೂರು ತಾಲೂಕಿನ ಜೆಡಿಎಸ್ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಕ್ಷೇತ್ರದ ಟಿಕೆಟ್ ಬಗ್ಗೆ ತೀವ್ರ ಗೊಂದಲ ಉಂಟಾಗಿದೆ.
ಜೆಡಿಎಸ್ನಲ್ಲೇ ಮೈಲಾರಿ ಮತ್ತು ಜಕ್ಕನಹಳ್ಳಿ ಲಿಂಗರಾಜು ಟಿಕೆಟ್ಗಾಗಿ ತೀವ್ರ ಪೈಪೋಟಿ ಬಿದ್ದಿರುವುದು ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಪಕ್ಷದಲ್ಲಿ ಹೀಗೆ ತೀವ್ರ ಭಿನ್ನಮತ ತಲೆದೋರಿರುವುದರಿಂದ ಪಕ್ಷದ ಒಗ್ಗಟ್ಟಿಗೆ ಹಾಗೂ ಚುನಾವಣಾ ಅಖಾಡಕ್ಕೆ ತೀವ್ರ ಹೊಡೆತ ಬಿದ್ದಿದೆ.
ಟಿಕೆಟ್ ಖಚಿತವಾಗದ್ದರಿಂದ ಈಗಾಗಲೆ ಬಹುತೇಕ ಮುಖಂಡರುಗಳು ಹಾಗೂ ಕಾರ್ಯಕರ್ತರು ಪಕ್ಷ ತೊರೆದು ಬೇರೆ ಪಕ್ಷಗಳಿಗೆ ಸೇರುತ್ತಿರುವುದರಿಂದ ಈ ಕೂಡಲೆ ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರು ಮತ್ತು ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ತುರ್ತಾಗಿ ಕಲ್ಪತರು ನಾಡು ತಿಪಟೂರಿನ ಅಭ್ಯರ್ಥಿ ಗೊಂದಲದ ವಿಚಾರವನ್ನು ಬಗೆಹರಿಸಬೇಕೆಂದು ಪ್ರೊ.ಎಂ.ರೇಣುಕಾರ್ಯ ಒತ್ತಾಯಿಸಿದ್ದಾರೆ.