ಬಾಲಗಂಗಾಧರನಾಥ ಶ್ರೀಗಳ ಕನಸು ನನಸಾಗಿಸಿದ್ದೇನೆ: ಟಿ.ಬಿ. ಜಯಚಂದ್ರ
ಶಿರಾ: ಬಾಲಗಂಗಾಧರನಾಥ ಶ್ರೀಗಳ ಆಶಯದಂತೆ ಬಯಲು ಸೀಮೆಯ ಈ ಭಾಗಕ್ಕೆ ನೀರು ತಂದು ಅವರ ಕನಸನ್ನು ನನಸಾಗಿಸಿದ್ದೇನೆ ಎಂದು ಶಾಸಕ ಟಿ.ಬಿ. ಜಯಚಂದ್ರ ತಿಳಿಸಿದರು.
ಅವರು ತಾಲೂಕಿನ ಕಾಮನಗೊಂಡನಹಳ್ಳಿಯ ಶ್ರೀ ಮದ್ದಮ್ಮ ದೇವಿ ದೇವಸ್ಥಾನ ವತಿಯಿಂದ ನಿರ್ಮಿಸಿರುವ ಶ್ರೀ ಬಾಲಗಂಗಾಧರನಾಥ ಸ್ವಾಮಿಜಿ ಧರ್ಮ ಛತ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆದಿ ಚುಂಚನಗಿರಿ ಶ್ರೀಗಳು ಈ ಹಿಂದೆ ಈ ಭಾಗದಲ್ಲಿ ಪ್ರವಾಸ ಮಾಡುವ ವೇಳೆ ರೈತ ವರ್ಗದ ಸ್ಥಿತಿಗತಿಗಳನ್ನು ಕಂಡು ಮರುಗಿದ್ದರು. ಅಲ್ಲದೆ ಈ ಭಾಗಕ್ಕೆ ನೀರಾವರಿ ಯೋಜನೆ ಜಾರಿಯಾಗಬೇಕು. ಇಲ್ಲವಾದಲ್ಲಿ ಮರುಭೂಮಿ ಪ್ರದೇಶವಾಗುವ ಸಾಧ್ಯತೆಯನ್ನು ಹೇಳಿದಾಗ ನನ್ನ ಮನಸ್ಸಿನಲ್ಲಿ ಅಂದೆ ಶ್ರೀಗಳ ಆಶಯ ಪೂರ್ಣಗೊಳಿಸಲು ಚಿಂತನೆ ಮಾಡಿ ಅವರ ಆರ್ಶೀವಾದದಿಂದ ಶಿರಾ ಕಳ್ಳಂಬೆಳ್ಳ ಕೆರೆಗಳಿಗೆ ನೀರು ತಂದು ಯಶಸ್ಸು ಕಂಡಿದ್ದೇನೆ ಎಂದರು. ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮಿಜಿ ಮಾತನಾಡಿ ತ್ಯಾಗ ಜೀವನ, ವಿಶ್ವಾಸಗಳೇ ಮನುಷ್ಯ ಮುಕ್ತಿ ಹೊಂದಲು ಇರುವ ಸರಳ ಮಾರ್ಗ ಎಂದು ಹೇಳಿದರು.
ಶ್ರೀಮಠವು ಕೇವಲ ಒಕ್ಕಲಿಗ ಜನಾಂಗಕ್ಕೆ ಸೀಮಿತವಾಗದೆ ದೀನ ದಲಿತರ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಹೇಳಿಗೆಗೆ ತನ್ನದೆ ಆದ ಕೊಡುಗೆ ನೀಡಿದೆ. ಇದು ಬಾಲಗಂಗಾಧರನಾಥ ಶ್ರೀಗಳ ಕನಸು ಕೂಡ ಎಂದರು. ಕೋಲಾರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಗಳು ಶಾಶ್ವತ ನೀರಾವರಿ ಯೋಜನೆಗಳಿಲ್ಲದೆ ತತ್ತರಿಸಿವೆ. ಇದನ್ನು ಕೊನೆಗಾಣಿಸುವ ಅವಶ್ಯಕತೆ ಇದ್ದು ಶ್ರೀಮಠದ ಹೋರಾಟಕ್ಕೆ ಎಲ್ಲರೂ ಕೈಜೋಡಿಸಬೇಕು. ಅಲ್ಲದೆ ಈ ಬಗ್ಗೆ ಯೋಜನೆ ತಯಾರಿಸಿ ಟಿ.ಬಿ.ಜಯಚಂದ್ರ ರವರು ಸರ್ಕಾರದ ಮುಂದೆ ಇಟ್ಟಿರುವುದು ಶ್ಲಾಘನಾರ್ಹ ಎಂದರು.
ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನದ ಹನುಮಂತನಾಥ ಸ್ವಾಮಿಜಿ, ಮಾಜಿ ಸಚಿವ ಬಿ.ಸತ್ಯನಾರಾಯಣ, ಪಟ್ಟದ ಪೂಜಾರ್ ದೊಡ್ಡರಾಜಪ್ಪ, ಸಮಾರಂಭದಲ್ಲಿ ಆಂದ್ರ ಪ್ರದೇಶದ ಮಾಜಿ ಸಚಿವ ನರಸೇಗೌಡ, ಕುಂಚಿಟಿಗರ ಸಂಘದ ಅಧ್ಯಕ್ಷ ಗುಳಿಗೇನಹಳ್ಳಿ ನಾಗರಾಜ್, ಕಾರ್ಯದರ್ಶಿ ಎಚ್.ಜಿ.ಲಿಂಗಯ್ಯ, ರವಿ, ಹಾಲು ಒಕ್ಕೂಟದ ನಿರ್ದೆಶಕ ಮೂಡಲಗಿರಿಯಪ್ಪ, ಗ್ರಾ.ಪಂ. ಅಧ್ಯಕ್ಷ ಪದ್ಮರಾಜ್, ಪಿ.ಎಲ್.ಡಿ.ಬ್ಯಾಂಕ್ ಅಧ್ಯಕ್ಷ ಮದ್ದೇವಳ್ಳಿ ರಾಮಕೃಷ್ಣ,ಮಹದೇವಪ್ಪ, ಮತ್ತಿತರರು ಹಾಜರಿದ್ದರು.