ರೇಣುಕಾಚಾರ್ಯ ಪಶ್ಚಾತ್ತಾಪ ಪಟ್ಟಿದ್ದಾರೆ
'ತುರುವೇಕೆರೆ: ರೇಣುಕಾಚಾರ್ಯ ಹಿಂದೆ ನಡೆದು ಹೋಗಿರುವ ಜಯಲಕ್ಷ್ಮಿ ಪ್ರಕರಣದಿಂದ ತುಂಬಾ ನೊಂದು ಪಶ್ಚಾತ್ತಾಪ ಪಟ್ಟಿದ್ದಾರೆ. ಈಗ ಅವರು ಬಹಳ ಜವಾಬ್ದಾರಿಯಿಂದ ವರ್ತಿಸುವ ವ್ಯಕ್ತಿಯಾಗಿದ್ದಾರೆ.
ಹೀಗೆಂದು ಮಾಜಿ ಸಚಿವ ರೇಣುಕಾಚಾರ್ಯರ ಪರ ವಕಾಲತ್ತು ವಹಿಸಿದವರು ರಾಜ್ಯ ಕೆಜೆಪಿಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ. ಪಟ್ಟಣದ ವಿರಕ್ತ ಮಠದ ಕಲ್ಯಾಣ ಮಂಟಪದಲ್ಲಿ ನಡೆದ ಮಹಿಳಾ ಕಾರ್ಯಕರ್ತರ ಸಭೆಗೆ ಆಗಮಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು.
ರೇಣುಕಾಚಾರ್ಯರ ಪ್ರಕರಣವನ್ನು ಮಾಧ್ಯಮಗಳೂ ಸಹ ಅತಿಯಾಗಿ ಬಿಂಬಿಸಿದವು. ರೇಣುಕಾಚಾರ್ಯರ ಪ್ರಕರಣದಲ್ಲಿ ತುಂಬಾ ನೋವು ಪಟ್ಟವರು ರೇಣುಕಾಚಾರ್ಯರ ಮಡದಿ ಮತ್ತು ಮಕ್ಕಳು ಎಂಬುದನ್ನು ಮರೆಯಬಾರದು. ನಾಲ್ಕು ಗೋಡೆಗಳ ಮಧ್ಯೆ ಖಾಸಗಿಯಾಗಿ ಮಾಡಿದ ಪ್ರಮಾದವನ್ನು ಇಷ್ಟು ದೊಡ್ಡಮಟ್ಟಕ್ಕೆ ಯಾರೂ ತೆಗೆದುಕೊಂಡು ಹೋಗುವುದು ಸರಿಯಲ್ಲ. ಇದರಲ್ಲಿ ಜಯಲಕ್ಷ್ಮಿಯವರದ್ದೂ ತಪ್ಪಿದೆ. ಯಾವುದೇ ಮಹಿಳೆಗೆ ಅನ್ಯಾಯವಾಗುವುದನ್ನು ತಾವು ಸಹಿಸುವುದಿಲ್ಲ. ಆದರೆ ಸಮಾಜಕ್ಕೆ ವಿರೋಧಿಯಾದ ನಿಲುವುಗಳನ್ನು ತೆಗೆದುಕೊಂಡ ಮಹಿಳೆಯರ ಪರ ದನಿ ಎತ್ತಿದರೆ ತಪ್ಪಾಗುತ್ತದೆ ಹಾಗೂ ಸಮಾಜಕ್ಕೆ ತಾವು ತಪ್ಪು ಸಂದೇಶವನ್ನು ನೀಡಿದಂತಾಗುತ್ತದೆ ಎಂದು ಮಂಜುಳಾ ಹೇಳಿದರು.
ಮಹಿಳೆಯರಿಗೆ ರಕ್ಷಣೆ ಇಲ್ಲ: ಈ ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವೇ ಇಲ್ಲ. ರಾಜ್ಯದಲ್ಲಿ ನಿರಂತರವಾಗಿ ಮಹಿಳೆಯರ ಮೇಲೆ ದೌರ್ಜನ್ಯ ಅತ್ಯಾಚಾರ ಪ್ರಕರಣಗಳು ಸಂಭವಿಸುತ್ತಲೇ ಇದ್ದರೂ ಸರ್ಕಾರ ಮೌನವಾಗೇ ಕುಳಿತಿತ್ತು. ಹಲವು ಬಾರಿ ತಾವು ಅಧ್ಯಕ್ಷರಾಗಿದ್ದ ಮಹಿಳಾ ಆಯೋಗದ ಪರವಾಗಿ ಸರ್ಕಾರಕ್ಕೆ ವಿನಂತಿಸಿಕೊಂಡರೂ ಸಹ ಪ್ರಯೋಜನವಾಗಲಿಲ್ಲ. ಇತರೆ ರಾಜ್ಯಗಳು ಮಹಿಳೆಯರ ಪರ ದನಿ ಎತ್ತಿದವು. ಆದರೆ ಈ ಬಿಜೆಪಿ ಸರ್ಕಾರವನ್ನು ಮುನ್ನಡೆಸುತ್ತಿರುವ ಮುಖ್ಯಮಂತ್ರಿಗಳು ಚಕಾರವನ್ನೇ ಎತ್ತಲಿಲ್ಲ ಎಂದು ಮಂಜುಳಾ ಆಕ್ಷೇಪಿಸಿದರು.
ಅಪರೂಪದ ವ್ಯಕ್ತಿ: ತಾವು ಕಂಡ ಅಪರೂಪದ ವ್ಯಕ್ತಿತ್ವ ಉಳ್ಳ ಯಡಿಯೂರಪ್ಪನವರು ಮಹಿಳೆಯರ ಸರ್ವತೋಮುಖ ಅಭಿವೃಧ್ಧಿಗಾಗಿ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಮಹಿಳೆಯರ ಪರ ಇದ್ದರು. ಭಾಗ್ಯಲಕ್ಷ್ಮಿ ಯೋಜನೆ, ವಿದ್ಯಾರ್ಥಿನಿಯರಗೆ ಉಚಿತ ಶಿಕ್ಷಣ, ಸೈಕಲ್ ಯೋಜನೆ, ಮಡಿಲು, ಮುಂತಾದ ಮಹಿಳಾ ಉಪಯೋಗಿ ಯೋಜನೆಗಳು ಯಡಿಯೂರಪ್ಪನವರ ಸಾಧನೆಗಳು. ಈ ಚುನಾವಣೆಯಲ್ಲಿ ರಾಜ್ಯದ ಮಹಿಳೆಯರು ಯಡಿಯೂರಪ್ಪನವರ ಪರವಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ರಾಜ್ಯದಲ್ಲಿ ಕೆಜೆಪಿ ವತಿಯಿಂದ ಸ್ಪರ್ಧೆ ಮಾಡುವ ಹಲವಾರು ಮಹಿಳೆಯರು ಇದ್ದಾರೆ ಎಂದರು.