ಕಾಡಾನೆ ತುಳಿತ: ಯುವಕ ಬಲಿ
ಗುಬ್ಬಿ: ಕಾಡಾನೆ ನೋಡುವ ಕುತೂಹಲದಲ್ಲಿ ಅದನ್ನು ಹಿಂಬಾಲಿಸಿದ ಯುವಕನನ್ನು ರೊಚ್ಚಿಗೆದ್ದ ಆನೆಯ ತುಳಿತಕ್ಕೆ ಬಲಿಯಾದ ಘಟನೆ ಇಂದು ಗುಬ್ಬಿ ತಾಲ್ಲೂಕು ಸಿ.ಎಸ್.ಪುರ ಕೆರೆಯಲ್ಲಿ ನಡೆದಿದೆ.
ಗುಬ್ಬಿ ತಾಲೂಕು ಸಿ.ಎಸ್.ಪುರ ಹೋಬಳಿ ಹೊರಕೆರೆ ಗ್ರಾಮದ ನಿವಾಸಿ ಯೋಗೀಶ್ (30) ಬಲಿಯಾದ ಯುವಕ. ಕಳೆದ ಎರಡು ದಿನದಿಂದ ತುರುವೇಕೆರೆ ತಾಲೂಕಿನಲ್ಲಿ ಸಂಚರಿಸಿದ್ದ ಮೂರು ಕಾಡಾನೆಗಳು ಮಾವಿನಕೆರೆಯಿಂದ ಪಯಣ ಬೆಳೆಸಿ, ಗುಬ್ಬಿ ತಾಲೂಕು ಸಿ.ಎಸ್.ಪುರ ಕೆರೆಯಂಗಳದತ್ತ ಮಧ್ಯಾಹ್ನದ ವೇಳೆಯೇ ಆಗಮಿಸಿರುವುದು ಜನರಲ್ಲಿ ಕುತೂಹಲ ಮೂಡಿಸಿದೆ. ಆನೆಗಳನ್ನು ನೋಡುವ ಕೌತುಕದಲ್ಲಿ ಹಿಂಬಾಲಿಸಿದ ಯುವಕರ ಗುಂಪನ್ನು ಕಂಡು ರೊಚ್ಚಿಗೆದ್ದ ಆನೆಗಳು ಹಿಂತಿರುಗಿ ಯುವಕರತ್ತ ಧಾವಿಸಿವೆ. ಯುವಕ ಯೋಗೀಶ್ ಆನೆ ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ. ಕೆರೆಯಿಂದ ಹೊರ ಬಂದ ಕಾಡಾನೆಗಳು ಗ್ರಾಮಗಳ ಬದಿಯಲ್ಲಿಯೇ ಸುಳಿದು ಸಂಚರಿಸುತ್ತಿದ್ದನ್ನು ನೋಡಲು ಹೋದಾಗ ಈ ದುರ್ಘಟನೆ ನಡೆದಿದೆ.