ಹಣದಿಂದಲೇ ಎಲ್ಲವೂ ಸಾಧ್ಯವಿಲ್ಲ: ಮಾಧುಸ್ವಾಮಿ
ಹುಳಿಯಾರು: ಹೆಚ್ಚೆಚ್ಚು ಅಭಿವೃದ್ಧಿ ಕೆಲಸ ಮಾಡಿ ಜನರ ಪ್ರೀತಿ, ವಿಶ್ವಾಸಗಳಿಸುವ ಮೂಲಕ ಶಾಶ್ವತ ಸ್ಥಾನ ಪಡೆಯಬೇಕೆ ಹೊರತು, ಚುನಾವಣೆಗೆ ಮುಂಚೆ ಒಂದಿಷ್ಟು ಹಣ, ಗೆದ್ದ ನಂತರ ಮತ್ತೊಂದಿಷ್ಟು ಹಣ ಕೊಡುವ ಪೊಳ್ಳು ಭರವಸೆಯಿಂದ ಸಮಾಜದಲ್ಲಿ ಪಾರುಪತ್ಯ ನಡೆಸಲು ಸಾಧ್ಯವಿಲ್ಲ ಎಂದು ಮಾಜಿ ಶಾಸಕ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.
ಹುಳಿಯಾರಿನಲ್ಲಿ ಮುಸ್ಲಿಂ ಸಮುದಾಯದ ಮುಖಂಡರನ್ನು ಕೆಜೆಪಿಗೆ ಬರಮಾಡಿಕೊಂಡು ಮಾತನಾಡಿದ ಅವರು, ಸಚಿವ ಹಾಗೂ ಶಾಸಕ ಸ್ಥಾನದಲ್ಲಿದ್ದ, ವ್ಯಕ್ತಿಗಳು ತೂಕದ ವ್ಯಕ್ತಿತ್ವದಿಂದ ಮಾತನಾಡಬೇಕೆ ಹೊರತು, ಕೇವಲ ಓಲೈಕೆಗಾಗಿ ಇನ್ನೊಬ್ಬರನ್ನು ತೆಗಳುವ ಕಾರ್ಯಕ್ಕೆ ಮುಂದಾಗಬಾರದು ಎಂದು ಹೇಳಿದರು. ಹುಳಿಯಾರು ಗ್ರಾಪಂ ಮಾಜಿ ಉಪಾಧ್ಯಕ್ಷ ಜಹೀರ್ಸಾಬ್,ಸದಸ್ಯ ಇಸ್ಮಾಯಿಲ್, ಶೌಕತ್ ಅಲಿ, ಜಬಿಉಲ್ಲಾ ಮತ್ತಿತರರು ಈ ಸಂದರ್ಭದಲ್ಲಿ ಕೆಜೆಪಿ ಸೇರಿದರು.