ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಜಿಎಸ್ಬಿ ತ್ರಿಪಾತ್ರಾಭಿನಯ: ಶಿವಪ್ರಸಾದ್ ಲೇವಡಿ

Rashmi Kasaragodu
Updated On : 6 Apr 2013, 11:49 am

ತುಮಕೂರು: ತುಮಕೂರು ಬಿಜೆಪಿ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ತ್ರಿಪಾತ್ರಾಭಿನಯ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವಪ್ರಸಾದ್ ಲೇವಡಿ ಮಾಡಿದ್ದಾರೆ.
ಅವರು ತುಮಕೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಸವರಾಜು ಬಿಜೆಪಿ ಸಂಸದರಾಗಿದ್ದಾರೆ. ಕೆಜೆಪಿ ಪ್ರಚಾರಕರಾಗಿದ್ದಾರೆ. ಕಾಂಗ್ರೆಸ್ ಮಾರ್ಗದರ್ಶಕರಾಗಿದ್ದಾರೆ. ಹೀಗೆ ಏಕ ಕಾಲದಲ್ಲಿ ತ್ರಿಪಾತ್ರಾಭಿನಯ ಮಾಡಿಕೊಂಡು ತಿರುಗುತ್ತಿದ್ದಾರೆ ಎಂದು ಶಿವಪ್ರಸಾದ್ ಮಾರ್ಮಿಕವಾಗಿ ನುಡಿದರು.
ಸಿದ್ಧಾಂತ, ತತ್ವ, ಬದ್ಧತೆ ಯಾವುದೂ ಇಲ್ಲದ ಮನುಷ್ಯ ಜಿ.ಎಸ್. ಬಸವರಾಜು ಎಂದು ಕಿಡಿಕಾರಿದ ಶಿವಪ್ರಸಾದ್, ಕಿರಿಯರನ್ನು ತಪ್ಪುದಾರಿಗೆಳೆದು ಲಕ್ಷಾಂತರ ಬಿಜೆಪಿ ಕಾರ್ಯಕರ್ತರಿಗೆ ಕೆಟ್ಟ ಸಂದೇಶ ರವಾನಿಸುತ್ತಿದ್ದಾರೆ. ಬಿಜೆಪಿ ಲೋಕಸಭಾ ಸದಸ್ಯನಾಗಿದ್ದುಕೊಂಡು, ಪಕ್ಷಕ್ಕೆ ದ್ರೋಹ ಬಗೆಯುತ್ತಿದ್ದಾರೆ. ಕನಿಷ್ಠ ನೈತಿಕತೆ, ಪ್ರಜಾಪ್ರಭುತ್ವದ ಬಗ್ಗೆ ಕಾಳಜಿಯಿದ್ದರೆ, ಲೋಕಸಭಾ ಸ್ಥಾನಕ್ಕೆ ಮೊದಲು ರಾಜಿನಾಮೆ ನೀಡಲಿ ಎಂದು ಸವಾಲು ಹಾಕಿದರು.
ಸದ್ಯ ಜಿಎಸ್ಬಿ ಕೆಜೆಪಿ ಪ್ರಚಾರಕರಾಗಿದ್ದಾರೆ. ಜತೆಗೆ ಬಿಜೆಪಿ ಒಡೆದು ಕಾಂಗ್ರೆಸ್ ಬೆಳೆಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕುತಂತ್ರ ರಾಜಕಾರಣಕ್ಕೆ ಕುಖ್ಯಾತರಾಗಿದ್ದಾರೆ. ಸಾವಿರಾರು ಗಿಡಗಳನ್ನು ನೆಟ್ಟಿದ್ದಾಗಿ ಹೇಳಿಕೊಳ್ಳುವ ಜಿಎಸ್ಬಿ, ಅವುಗಳನ್ನು ಯಾವ ಸ್ಥಿತಿಯಲ್ಲಿಟ್ಟಿದ್ದಾರೆ ಎಂಬುದನ್ನು ಮೊದಲು ಜನತೆಗೆ ತಿಳಿಸಬೇಕು ಎಂದರು.
ಬೆಂಗಳೂರಿನಲ್ಲಿ ಏ. 8 ರಂದು ಬಿಜೆಪಿ ಸಮಾವೇಶ ಏರ್ಪಾಟಾಗಿದ್ದು, ತುಮಕೂರಿನಿಂದ ಸಾವಿರಾರು ಮಂದಿ ಕಾರ್ಯಕರ್ತರು ಪಾಲ್ಗೊಳ್ಳಲ್ಲಿದ್ದಾರೆ. ಜತೆಗೆ 13 ಜನರ ಕಾರ್ಯಪಡೆ, ನಿರ್ವಹಣಾ ಸಮಿತಿ ನೇಮಿಸಲಾಗುವುದು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement