ಮಧುಗಿರಿ: ಸಮರ್ಥ ನಾಯಕತ್ವದ ಕೊರತೆ
ವೈ.ಸೋಮಶೇಖರ್
ಮಧುಗಿರಿ: ಸಮರ್ಥ ನಾಯಕತ್ವದ ಕೊರತೆಯಿಂದಾಗಿ ಎಲ್ಲ ರಂಗಗಳಲ್ಲೂ ಮಧುಗಿರಿ ತಾಲೂಕು ಅಭಿವೃದ್ಧಿ ವಂಚಿತವಾಗಿ ಜಾತಿ ಲೇಪನ, ರಾಜಕೀಯ ಒಳಸುಳಿಗೆ ಸಿಲುಕಿ ನಲುಗುತ್ತಿದೆ.
ಮೀಸಲು ಕ್ಷೇತ್ರವಾಗಿದ್ದ ಮಧುಗಿರಿ ಕ್ಷೇತ್ರ ಪುನರವಿಂಗಡಣೆಯಲ್ಲಿ ಸಾಮಾನ್ಯ ಕ್ಷೇತ್ರವಾದ ನಂತರ ಕಾಂಗ್ರೆಸ್ ಪಕ್ಷದ ಕೆ.ಎನ್.ರಾಜಣ್ಣ ಅವರ ವಿರುದ್ಧ ಮಾಜಿ ಮಂತ್ರಿ ಸಿ.ಚನ್ನಿಗಪ್ಪ ಪುತ್ರ ಡಿ.ಸಿ. ಗೌರಿಶಂಕರ್ ಜೆಡಿಎಸ್ನಿಂದ ಸ್ಪರ್ಧಿಸಿ ಗೆದ್ದು ಆಪರೇಷನ್ ಕಮಲಕ್ಕೆ ಸಿಕ್ಕಿ ರಾಜಿನಾಮೆ ನೀಡಿದ್ದು ಇತಿಹಾಸ. ನಂತರ ನಡೆದ ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾಕುಮಾರಸ್ವಾಮಿ ಸ್ಪರ್ಧಿಸಿದ್ದರು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಕುಟುಂಬದ ಸೊಸೆ ಗೆದ್ದರೆ ಕ್ಷೇತ್ರ ಅಬಿವೃದ್ಧಿ ಹೊಂದುತ್ತದೆ ಎಂದು ಜನರು ಭಾವಿಸಿ ಗೆಲ್ಲಿಸಿದರು. ಆದರೆ ಮಧುಗಿರಿ ಕ್ಷೇತ್ರ ಅಕ್ಷರಶಃ ಅಭಿವೃದ್ಧಿ ಕಾಣದೇ ಕೊಟ್ಟ ಭರವಸೆ ಈಡೇರಿಸದೇ ಕ್ಷೇತ್ರದಿಂದ ಕಾಲ್ಕಿತ್ತರು. ಅಂದು ಕೂಡ ಕಾಂಗ್ರೆಸ್ನಿಂದ ಕೆ.ಎನ್.ರಾಜಣ್ಣ, ದೇವೇಗೌಡರ ಮಾನಸ ಪುತ್ರ ಎಂದೇ ಕರೆಯುತ್ತಿದ್ದ ಸಿ.ಚನ್ನಿಗಪ್ಪ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆದರೆ ದೇವೇಗೌಡರ ರಾಜಕೀಯ ಚದುರಂಗದಾಟದಲ್ಲಿ ಈ ಇಬ್ಬರನ್ನು ಸೋಲಿಸಲೆಂದೇ ಅವರ ವಿರುದ್ಧ ಸೊಸೆ ನಿಲ್ಲಿಸಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದದ್ದು ಕೂಡ ಇತಿಹಾಸ.
ಕಸರತ್ತು: ಆದರೆ ಈಗ ಅನಿತಾಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಸ್ಪರ್ಧಿಸಲು ಸಜ್ಜಾಗಿರುವ ಹಿನ್ನೆಲೆಯಲ್ಲಿ ಜೆಡಿಎಸ್ ವರಿಷ್ಠರು ಪ್ರಬಲ ಅಭ್ಯರ್ಥಿ ನಿಲ್ಲಿಸಲು ಕಸರತ್ತು ನಡೆಸಿದ್ದಾರೆ. ಈ ಸಲ ಕಾಂಗ್ರೆಸ್ ಪಕ್ಷದ ಕೆ.ಎನ್.ರಾಜಣ್ಣ ಎರಡು ಸಲ ಕೂದಲೆಳೆ ಅಂತರದಲ್ಲಿ ಸೋತರೂ ಕೂಡ ಕ್ಷೇತ್ರ ಬಿಡದೇ ನಿರಂತರ ಜನರ ಒಡನಾಟ ಹೊಂದಿ ಕಷ್ಟ ಸುಖಕ್ಕೆ ಸ್ಪಂದಿಸುತ್ತಾ ಸೋಲನ್ನೇ ಸವಲಾಗಿ ಸ್ವೀಕರಿಸಿ ಡಿಸಿಸಿ ಬ್ಯಾಂಕಿನ ಮೂಲಕ ಮತದಾರರಿಗೆ ಮತ್ತಷ್ಟು ಹತ್ತಿರವಾಗಿರುವುದು ಈ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಹಾಗಾಗಿ ರಾಜಣ್ಣ ಈಗಾಗಲೇ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡಿದ್ದು ಟಿಕೆಟ್ ಖಚಿತ ಎಂದು ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಕ್ಷೇತ್ರದಲ್ಲಿ 5 ಜಿ.ಪಂ.ಪೈಕಿ 4ರಲ್ಲಿ ಕಾಂಗ್ರೆಸ್,1ರಲ್ಲಿ ಜೆಡಿಎಸ್ ಇದ್ದು ತಾ.ಪಂ.ನಲ್ಲೂ ಕಾಂಗ್ರೆಸ್ ಆಡಳಿತ ನಡೆಸುತ್ತಿದೆ. ಇತ್ತಿಚೆಗೆ ನಡೆದ ಪುರಸಭೆ ಚುನಾವಣೆಯಲ್ಲೂ ಕಾಂಗ್ರೆಸ್ 12, ಜೆಡಿಎಸ್ 7, ಪಕ್ಷೇತರರು 4 ರಲ್ಲಿ ಗೆದ್ದಿದ್ದು ಪುರಸಭೆ ಕೂಡ ಕಾಂಗ್ರೆಸ್ ಅಧಿಕಾರ ಹಿಡಿದು ತಾ. ಕಾಂಗ್ರೆಸ್ ಮುಂಚೂಣಿಯಲ್ಲಿದೆ. ಜೆಡಿಎಸ್ ಮತ್ತು ಕಾಂಗ್ರೆಸ್ಗೆ ನೇರ ಹಣಾಹಣಿ ಏರ್ಪಟ್ಟರೂ ಕೂಡ ಬಿಎಸ್ಪಿ ಅಭ್ಯರ್ಥಿ ಕೋರಮಂಗಲ ಮುನಿಯಪ್ಪ ಕಳೆದ 6 ತಿಂಗಳಿಂದ ಕಾಂಗ್ರೆಸ್ ಮತಗಳ ಮೇಲೆ ಕಣ್ಣಿಟ್ಟು ಸಂಘಟಿಸುತ್ತಿರುವುದು ಕಾಂಗ್ರೆಸ್ಗೆನುಂಗಲಾರದ ತುಪ್ಪವಾಗಿ ಕಾಡುತ್ತಿದೆ.
ಮಾದಿಗ ಸಮುದಾಯದ ಮತದ ಮೇಲೆ ಕಣ್ಣು: 50 ಸಾವಿರಕ್ಕೂ ಅಧಿಕ ಮಾದಿಗ ಸಮುದಾಯದ ಮತದಾರರಿದ್ದು ಆ ಜನರ ಮೇಲೆ ಕಣ್ಣಿಟ್ಟಿರುವ ಬಿಎಸ್ಪಿ ಅದೇ ಜನಾಂಗದ ಕೋರಮಂಗಲ ಮುನಿಯಪ್ಪ ಅವರನ್ನು ಕಣಕ್ಕಿಳಿಸಿದೆ. ಆದರೂ ಕೆ.ಎನ್.ರಾಜಣ್ಣ ಅವರಿಗೆ ಅನುಕಂಪದ ಅಲೆಯಿದ್ದು ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸಿರುವುದು ವರದಾನ. ಜೆಡಿಎಸ್ ಅಭ್ಯರ್ಥಿ ಐಎಎಸ್ ಅಧಿಕಾರಿ ವೀರಭದ್ರಯ್ಯ ಎಂದೇ ಬಿಂಬಿತವಾಗಿದ್ದು ಈಗ 3 ವರ್ಷಗಳಿಂದ ಇಲ್ಲಿನ ಜನರು ಶುಭ ಕಾರ್ಯಗಳಿಗೆ ಕರೆದಾಗ ಬಂದು ಹೋಗುವ ಪರಿ ಪಾಠ ಹೊಂದಿ ಪಕ್ಷ ಸಂಘಟಿಸುವ ಮೂಲಕ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದು ಅಲ್ಲದೆ ಒಕ್ಕಲಿಗ ಮತಗಳು ಜೆಡಿಎಸ್ಗೆ ಹೋಗಬಹುದು ಏನ್ನಲಾಗಿದೆ. ಅಲ್ಲದೆ ಅತಿ ಹೆಚ್ಚು ಒಕ್ಕಲಿಗ ಪ್ರಾಬಲ್ಯ ಹೊಂದಿರುವ ದೊಡ್ಡೇರಿ ಹೋಬಳಿ ಪ್ರಮುಖ ಏನಿಸಿದರೂ ಎಸ್ಸಿ ಮತಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಆದರೆ ವೀರಭದ್ರಯ್ಯ ಅವರ ವಿಆರ್ಎಸ್ ವಿಚಾರದಲ್ಲಿ ಕಾನೂನು ತೊಡಕಾಗಿದ್ದು ಒಂದು ವೇಳೆ ವಿಆರ್ಎಸ್ ಆಗದಿದ್ದರೆ ಅವರ ಪುತ್ರ ಕಾರ್ತಿಕ್ ಅವರನ್ನು ಕಣಕ್ಕಿಳಿಸಲು ವರಿಷ್ಠರು ಅಲೋಚಿಸಿದ್ದಾರೆ. ಆ ನಿಟ್ಟಿನಲ್ಲಿ ಕಾರ್ತಿಕ್ ಈಗಾಗಲೇ ಕ್ಷೇತ್ರದಾದ್ಯಂತ ಒಂದು ಸುತ್ತು ರೋಡ್ ಶೋ ನಡೆಸಿ ಜನರ ಗಮನ ಸಳೆದಿದ್ದಾರೆ.
ಇನ್ನು ಬಿಜೆಪಿ ಹೊಸ ಮುಖ ಸುಮಿತ್ರಾದೇವಿ ಅವರನ್ನು ಕಣಕ್ಕಿಳಿಸಿದ್ದು ಕಳೆದ ಉಪ ಚುನಾವಣೆಯಲ್ಲಿ ಮಾಜಿ ಮಂತ್ರಿ ಸಿ.ಚನ್ನಿಗಪ್ಪ ಬಿಜೆಪಿಯಿಂದ ಸ್ಪರ್ಧಿಸಿ 33 ಸಾವಿರ ಮತ ಪಡೆದಿದ್ದರು. ಇನ್ನು ಬಿಎಸ್ಆರ್ ಮತ್ತು ಕೆಜೆಪಿ ಕ್ಷೇತ್ರದಲ್ಲಿ ಇನ್ನು ನೆಲೆ ಇಲ್ಲದೇ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಾಗಿದೆ. ಒಟ್ಟಿನಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಲಿವೆಯೇ ಎಂಬುದನ್ನು ಕಾದು ನೋಡಬೇಕಿದೆ