ನಾಮಪತ್ರ ಸಲ್ಲಿಕೆಗೂ ಮುನ್ನವೇ ಪ್ರಚಾರ ಶುರು
ಅದಲಗೆರೆ ನಾಗೇಂದ್ರಕುಮಾರ್
ತುಮಕೂರು: ಬೇಸಿಗೆಯ ದಗೆ ಏರತೊಡಗಿದಂತೆ ವಿಧಾನಸಭಾ ಚುನಾವಣಾ ಕಾವು ಕೂಡ ಏರತೊಡಗಿದೆ. ಈಗಾಗಲೇ ಚುನಾವಣಾ ದಿನಾಂಕ ಘೋಷಣೆಯಾಗಿರುವುದರಿಂದ ಘೋಷಿತ ಹಾಗೂ ಟಿಕೆಟ್ ನಿರೀಕ್ಷಿತ ಎನ್ನಲಾಗಿರುವ ಅಭ್ಯರ್ಥಿಗಳು ಅವರವರ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ತುಮಕೂರು ನಗರ ಹಾಗೂ ತುಮಕೂರು ಗ್ರಾಮಾಂತರದಲ್ಲಿ ವಿಧಾನಸಭಾ ಚುನಾವಣಾ ಕಾವು ನಾಮಪತ್ರ ಸಲ್ಲಿಕೆಗೂ ಮುನ್ನವೇ ಏರತೊಡಗಿದೆ. ಘೋಷಿತ ಹಾಗೂ ಟಿಕೆಟ್ ನಿರೀಕ್ಷಿತ ಕೆಜೆಪಿ, ಜೆಡಿಎಸ್ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕಿಂತ ಮುಂಚಿತವಾಗಿಯೇ ತಮ್ಮ - ತಮ್ಮ ಕ್ಷೇತ್ರಗಳಲ್ಲಿ ಮನೆ-ಮನೆಗೆ ತೆರಳಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಈಗಾಗಲೇ ಕೆಜೆಪಿ ತುಮಕೂರು ಜಿಲ್ಲೆಯ 3 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ತುಮಕೂರು ನಗರಕ್ಕೆ ಬಿಜೆಪಿ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಅವರ ಪುತ್ರ ಜ್ಯೋತಿಗಣೇಶ್, ತುಮಕೂರು ಗ್ರಾಮಾಂತರಕ್ಕೆ ಜೆಡಿಎಸ್ನಿಂದ ಇತ್ತೀಚಿಗೆ ಕೆಜೆಪಿಗೆ ಸೇರ್ಪಡೆಗೊಂಡ ಎಚ್.ನಿಂಗಪ್ಪ ಹಾಗೂ ತಿಪಟೂರು ಕ್ಷೇತ್ರಕ್ಕೆ ನಿವೃತ್ತ ಪೊಲೀಸ್ ಅಧಿಕಾರಿ ಲೋಕೇಶ್ವರ್.
ಬಿಜೆಪಿ, ಕೆಜೆಪಿ, ಜೆಡಿಎಸ್ ಪ್ರಚಾರ: ಈಗಾಗಲೇ ಕೆಜೆಪಿ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣಾ ದಿನಾಂಕ ಘೋಷಣೆಯಾದ ನಂತರ ಒಂದು ಸುತ್ತಿನ ಪ್ರಚಾರ ಕಾರ್ಯವನ್ನು ಜಿಲ್ಲೆಯಲ್ಲಿ ಕೈಗೊಂಡಿದ್ದಾರೆ. ಇದಕ್ಕೂ ಮುನ್ನ ಅಂದರೆ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲೂ ಯಡಿಯೂರಪ್ಪ ಮಿಂಚಿನ ಸಂಚಾರ ಕೈಗೊಂಡು ಚುನಾವಣೆ ಪ್ರಚಾರದಲ್ಲಿ ಭಾಗಿಯಾದ್ದರು.
ಏ. 9 ರಂದು ಯಡಿಯೂರಪ್ಪ ಚಿಕ್ಕನಾಯಕನಹಳ್ಳಿ, ತುಮಕೂರು ಗ್ರಾಮಾಂತರ, ತಿಪಟೂರು ವಿಧಾಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರ ಕಾರ್ಯ ಕೈಗೊಳ್ಳಲ್ಲಿದ್ದಾರೆ.
ಅದೇ ರೀತಿ ಬಿಜೆಪಿ ಕೂಡ ಪ್ರಚಾರ ಕಾರ್ಯದಲ್ಲಿ ತೊಡಗಿದ್ದು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ಕುಮಾರ್, ಹಾಲಿ ಸಚಿವರು ಸೇರಿದಂತೆ ರಾಜ್ಯ ಮುಖಂಡರು ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿಸಿದ್ದಾರೆ. ಹಾಗೆಯೇ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕೂಡ ಜಿಲ್ಲೆಯ ಅಲ್ಲಲ್ಲಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ.
ಜ್ಯೋತಿ ಗಣೇಶ್ ಪ್ರಚಾರ: ಈಗಾಗಲೇ ತುಮಕೂರು ನಗರ ಕೆಜೆಪಿ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಬಿಜೆಪಿ ಲೋಕಸಭಾ ಸದಸ್ಯ ಜಿ.ಎಸ್. ಬಸವರಾಜು ಅವರ ಪುತ್ರ ಜ್ಯೋತಿಗಣೇಶ್ ತಮ್ಮ ಬೆಂಬಲಿಗರೊಂದಿಗೆ ಮನೆ-ಮನೆಗೆ ತೆರಳಿ ಪ್ರಚಾರ ಕಾರ್ಯ ಕೈಗೊಂಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದ ಜ್ಯೋತಿಗಣೇಶ್ ಪ್ರಚಾರ ಕಾರ್ಯದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದಾರೆ.
ಡಿ.ಸಿ.ಗೌರಿಶಂಕರ್ ಪ್ರಚಾರ: ತುಮಕೂರು ಗ್ರಾಮಾಂತರಕ್ಕೆ ಜೆಡಿಎಸ್ನಿಂದ ಬಹುತೇಕ ಟಿಕೆಟ್ ಖಚಿತ ಎನ್ನಲಾಗಿರುವ ಮಾಜಿ ಸಚಿವ ಚೆನ್ನಿಗಪ್ಪನವರ ಪುತ್ರ ಡಿ.ಸಿ. ಗೌರಿಶಂಕರ್ ತಮ್ಮ ಬೆಂಬಲಿಗರೊಂದಿಗೆ ಮನೆ-ಮನೆಗೆ ತೆರಳಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿದ್ದಾರೆ. ಮಧುಗಿರಿ ವಿದಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ, ಆಪರೇಷನ್ ಕಮಲಕ್ಕೀಡಾಗಿ ಬಿಜೆಪಿ ಸೇರಿ ಮತ್ತೆ ಜೆಡಿಎಸ್ಗೆ ಮರಳಿ ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿರುವ ಗೌರಿಶಂಕರ್ ಚುನಾವಣೆಗೂ ಮುನ್ನವೇ ತುಮಕೂರು ಗ್ರಾಮಾಂತರದಲ್ಲಿ ಕಾಣಿಸಿಕೊಂಡಿದ್ದರು. ಈಗ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.