ಭಾರ್ಗವ ಬಂಧನಕ್ಕೆ ಹೆಚ್ಚಿದ ಆಗ್ರಹ
ತುಮಕೂರು: ಬ್ರೌಸಿಂಗ್ ಸೆಂಟರ್ ಒಡತಿ ಸ್ವೀಟಿ ಮರ್ಲಿನ್ ಆತ್ಮಹತ್ಯೆಗೆ ಕಾರಣ ಎಂಬ ಆರೋಪ ಎದುರಿಸುತ್ತಿರುವ ಖಾಸಗಿ ಸುದ್ದಿವಾಹಿನಿಯ ಕ್ಯಾಮೆರಾಮನ್ ಭಾರ್ಗವನ ಬಂಧನಕ್ಕೆ ತುಮಕೂರು ಜಿಲ್ಲಾ ಪತ್ರಕರ್ತರ ಸಂಘದ ರಾಷ್ಟ್ರೀಯ ಮಂಡಳಿ ಸದಸ್ಯ ಹೆಚ್.ಎಸ್. ರಾಮಣ್ಣ ಆಗ್ರಹಿಸಿದ್ದಾರೆ. ಘಟನೆ ನಡೆದು 10 ದಿನಗಳಾದರೂ, ಆರೋಪಿ ಬಂಧಿಸದಿರುವುದು, ರಾಜಕೀಯ ಒತ್ತಡಕ್ಕೆ ಮಣಿದು, ತನಿಖೆಯನ್ನು ನಿಧಾನಗತಿಗೊಳಿಸಿರುವುದು, ತನಿಖಾಧಿಕಾರಿ ಬದಲಾವಣೆ, ಇತ್ಯಾದಿ ವಿಷಯಗಳು ಈ ಪ್ರಕರಣದ ನ್ಯಾಯಯುತ ತನಿಖೆ ಬಗ್ಗೆ ಸಂಶಯ ಉಂಟು ಮಾಡುತ್ತಿವೆ. ಪೊಲೀಸರು ಯಾವುದೇ ಕಾರಣಕ್ಕೂ ಒತ್ತಡಕ್ಕೆ ಮಣಿಯದೆ ತಕ್ಷಣ ಆರೋಪಿ ಭಾರ್ಗವನನ್ನು ಬಂಧಿಸಿ, ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಮಾಧ್ಯಮದ ಮೇಲಿನ ಬೆದರಿಕೆ, ಹಲ್ಲೆಯನ್ನು ಮಾಧ್ಯಮ ಸಂಸ್ಥೆಗಳು ಹೇಗೆ ಕ್ಷಿಪ್ರವಾಗಿ ಪ್ರತಿಭಟಿಸುತ್ತವೆಯೋ, ಹಾಗೆಯೇ ಈ ಕೃತ್ಯವನ್ನು ಕೂಡ ಖಂಡಿಸಬೇಕು ಎಂದು ರಾಮಣ್ಣ ಆಗ್ರಹಿಸಿದ್ದಾರೆ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆರೋಪಿಯ ಕೃತ್ಯವನ್ನು ಖಂಡಿಸಿ, ಕಾನೂನು ಕ್ರಮಕ್ಕೆ ಒಳಪಡಿಸಲು ಆಗ್ರಹಿಸಬೇಕು. ಹಾಗೂ ಸ್ವೀಟಿ ಮರ್ಲಿನ್ ಕುಟುಂಬಕ್ಕೆ ಸಾಂತ್ವನ ಹೇಳಲು ಮುಂದಾಗಬೇಕು ಎಂದು ರಾಮಣ್ಣ ಈ ಸಂದರ್ಭದಲ್ಲಿ ಒತ್ತಾಯಿಸಿದ್ದಾರೆ.