ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ: ತಾಲೂಕು ಕಚೇರಿಯಲ್ಲಿ ಜನಸಾಗರ
ಕ.ಪ್ರ.ವಾರ್ತೆ ಕುಣಿಗಲ್ ಏ.7
ಭಾನುವಾರದಂದು ಸಹ ತಾಲೂಕು ಕಚೇರಿಯಲ್ಲಿ ಎಂದಿನಂತೆ ಜನಸಂದಣಿ ಇತ್ತು. ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ಅಂತಿಮ ದಿನವಾದ ಕಾರಣ, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಮತದಾರರು, ಮತಗಟ್ಟೆ ಅಧಿಕಾರಿಗಳಿಂದ ಕಚೇರಿ ತುಂಬಿ ತುಳುಕಿದ್ದು ವಿಶೇಷವಾಗಿತ್ತು.
ಕಳೆದ ಜನವರಿ 16ಕ್ಕೆ ಕೊನೆಗೊಂಡಂತೆ ತಾಲೂಕಿನಲ್ಲಿ 1,65,168 ಮತದಾರರ ಪೈಕಿ 83,516 ಪುರುಷ, 81,639 ಮಹಿಳಾ ಮತದಾರರು ಹಾಗೂ 16 ಇತರೆ ಮತದಾರರಿದ್ದು, ಮತಗಟ್ಟೆ ಅಧಿಕಾರಿಗಳ ಹಂತದಿಂದಲೂ, ಲೋಪಗಳನ್ನು ಸರಿಪಡಿಸಲು, ಸೂಕ್ತ ತರಬೇತಿ ನೀಡಿ ಮತದಾರರ ಪಟ್ಟಿಯಲ್ಲಿನ ದೋಷ ನಿವಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಇದೆ ಏಳರವರೆಗೂ ಮತಪಟ್ಟಿಯಲ್ಲಿ, ಅರ್ಹ ಮತದಾರರು ಹೊಸದಾಗಿ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಲಾದ ಕಾರಣ ಭಾನುವಾರವೂ ಸಹ ತಾಲೂಕು ಕಚೇರಿಯಲ್ಲಿ ಜನಸಂದಣಿ ಹೆಚ್ಚಿತ್ತು.
ತಾಲೂಕಿನ ವಿವಿಧ ಮತಗಟ್ಟೆ ವ್ಯಾಪ್ತಿಯ ಅಧಿಕಾರಿಗಳು, ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಹಾಲಿ ಮತದಾರರ ಪಟ್ಟಿಯಲ್ಲಿರುವವವರ ನೈಜತೆಯನ್ನು ಖುದ್ದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿರುವ ಕಾರಣ ಮತದಾರರ ಪಟ್ಟಿಯಲ್ಲಿ ಯಾವುದೇ ಲೋಪವಿಲ್ಲದಂತೆ ನಿರ್ವಹಿಸಲು ಸಾಧ್ಯವಾದಷ್ಟು ಮಟ್ಟಿಗೆ ಶಕ್ತಿಮೀರಿ ಶ್ರಮಿಸಲಾಗಿದೆ ಎಂದು ತಹಸೀಲ್ದಾರ್ ಜಗದೀಶ್ ತಿಳಿಸಿದರು.
ಕಳೆದ ಶನಿವಾರದ ಸಂಜೆ ವೇಳೆಗೆ, ಹೊಸದಾಗಿ ಹೆಸರು ನೋಂದಾಯಿಸಲು 3081 ಅರ್ಜಿಗಳು ಬಂದಿದ್ದರೆ, ವಿವಿಧ ಕಾರಣಗಳ ಮೇಲೆ ಮತದಾರ ಪಟ್ಟಿಯಿಂದ ಹೆಸರು ತೆಗೆಯಲು 1239, ತಿದ್ದುಪಡಿಗೆ 999, ವರ್ಗಾವಣೆಗೆ 58 ಅರ್ಜಿಗಳು ಬಂದಿವೆ ಎಂದ ಅವರು, ಭಾನುವಾರ ಸಹ ಮತದಾರರ ನೋಂದಣಿ ಕಾರ್ಯಕ್ರಮ ಇರುವುದರಿಂದ, ಭಾನುವಾರ ಸಂಜೆವರೆಗೂ ಮತ್ತಷ್ಟು ಅರ್ಜಿಗಳು ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎಂದರು.