ಮತ್ತೆ ಲಾಂಛನ ವಿವಾದ
ಕ.ಪ್ರ. ವಾರ್ತೆ ತುಮಕೂರು ಏ.7
ತುಮಕೂರು ವಿವಿ ಹಳೇ ಲಾಂಛನ ಮರುಸ್ಥಾಪನೆ ಹೋರಾಟಕ್ಕೆ ಮತ್ತೆ ಚಾಲನೆ ನೀಡಲಾಗಿದೆ. ಸದ್ದಿಲ್ಲದೇ ಲೋಗೋ ಬದಲಿಸಿ ರಾಜ್ಯಾದ್ಯಂತ ಸುದ್ದಿಯಾಗಿ, ಭಾರಿ ವಿವಾದಕ್ಕೀಡಾಗಿದ್ದ ತುಮಕೂರು ವಿವಿ ಈಗ ಮತ್ತೆ ಸುದ್ದಿಯಲ್ಲಿದೆ.
ಈ ಕುರಿತಂತೆ ತುಮಕೂರು ವಿವಿ ಲಾಂಛನ ಹೋರಾಟ ಸಮಿತಿ, ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಇ. ಶಿವಣ್ಣ, ಡಿವೈಎಫ್ಐ ಜಿಲ್ಲಾ ಕಾರ್ಯದರ್ಶಿ ಎಸ್. ರಾಘವೇಂದ್ರ, ನಗರ ಕಾರ್ಯದರ್ಶಿ ಆರ್. ಹರೀಶ್ ತುಮಕೂರು ವಿವಿ ಹಳೇ ಲಾಂಛನ ಉಳಿವಿಗಾಗಿ ವಿವಿಧ ರಾಜಕೀಯ ಪಕ್ಷಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಹಾಗೂ ಧನಿಯೆತ್ತಬೇಕು ಎಂದು ಆಗ್ರಹಿಸಿದ್ದಾರೆ. ತುಮಕೂರು ಜಿಲ್ಲಾ ಸಂಸ್ಕೃತಿಯನ್ನು ಸಾರುವ ಲೋಗೋವನ್ನು ಸದ್ದಿಲ್ಲದೆ ತೆಗೆದು, ಜಿಲ್ಲೆಗೆ ಅವಮಾನ ಮಾಡಿದ್ದ ತುಮಕೂರು ವಿವಿ ನಿಲವು ಕುರಿತು ಹಾಗೂ ತಮ್ಮ, ತಮ್ಮ ಪಕ್ಷದ ಪ್ರಣಾಳಿಕೆಗಳಲ್ಲಿ ಲೋಗೋ ಕುರಿತಂತೆ ಯಾವ ನಿಲುವು ತೆಗೆದುಕೊಳ್ಳಲಾಗುವುದು ಎಂಬುದರ ಕುರಿತು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿವೆ.
ಹಳೇ ಅಂಕಪಟ್ಟಿಗಳ ಗತಿಯೇನು: ತುಮಕೂರು ವಿವಿ ಆರಂಭವಾದ ದಿನಗಳಲ್ಲಿ ಜಿಲ್ಲೆಯ ಶಿಕ್ಷಣ ತಜ್ಞರು, ಜಿಲ್ಲೆಯ ಗಣ್ಯರು, ಹೋರಾಟಗಾರರ ಅಭಿಪ್ರಾಯಗಳನ್ನು ಪಡೆದು ಈ ಐತಿಹಾಸಿಕ ಲಾಂಛನ ರೂಪಿಸಲಾಗಿತ್ತು. ಜಿಲ್ಲೆಯ ಸಂಸ್ಕೃತಿ ಬಿಂಬಿಸುವ ತೆಂಗಿನ ಮರ, ಟುಮಕಿ ವಾದ್ಯ, ತುಂಬೆಗಿಡ, ಏಷ್ಯಾಖಂಡದಲ್ಲೇ ಅತಿ ದೊಡ್ಡದು ಎಂಬ ಖ್ಯಾತಿಯ ಮಧುಗಿರಿ ಏಕಶಿಲಾ ಬೆಟ್ಟಗಳನ್ನೊಳಗೊಂಡ ಹಳೇ ಲಾಂಛನ ಜಿಲ್ಲೆ ಹಾಗೂ ರಾಜ್ಯದ ಜನತೆಯ ಮೆಚ್ಚುಗೆ ಗಳಿಸಿತ್ತು.
ಸಾವಿರಾರು ಜನ ವಿದ್ಯಾರ್ಥಿಗಳು ಈಗಾಗಲೇ ಹಳೇ ಲಾಂಛನದಡಿ ಅಂಕಪಟ್ಟಿ ಪಡೆದುಕೊಂಡಿದ್ದಾರೆ. ಸದ್ದಿಲ್ಲದೆ, ಏಕಾಏಕಿ ಹೊಸ ಲಾಂಛನ ಸ್ಥಾಪಿಸಿ, ತುಮಕೂರು ಜಿಲ್ಲೆ ಜನತೆಯ ಭಾವನೆಗಳಿಗೆ ದಕ್ಕೆ ತರುವ ಕೆಲಸವನ್ನು ತುಮಕೂರು ವಿವಿ ಮಾಡಿದೆ. ಹಳೇ ಅಂಕಪಟ್ಟಿಗಳ ಗತಿಯೇನು, ಈ ಕುರಿತು ಯಾವ ರಾಜಕೀಯ ಪಕ್ಷಗಳ ನಿಲುವೇನು, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ತುಮಕೂರು ಜಿಲ್ಲೆಯ ಸಂಸ್ಕೃತಿ-ಪರಂಪರೆ ದೃಷ್ಟಿಯಿಂದ ಎಲ್ಲ ರಾಜಕೀಯ ಪಕ್ಷಗಳು ತಮ್ಮ - ತಮ್ಮ ನಿಲವನ್ನು ಸ್ಪಷ್ಟಪಡಿಸಬೇಕು ಎಂದು ಮೇಲಿನ ಸಂಘಟನೆಗಳು ಹಾಗೂ ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.
ಚುನಾವಣೆ ಬಂದಾಗ: ಚುನಾವಣೆ ಬಂದ ಕೂಡಲೇ ವಿವಿಧ ಆಶ್ವಾಸನೆಗಳನ್ನು ನೀಡುವ ಎಲ್ಲ ರಾಜಕೀಯ ಪಕ್ಷಗಳು ಜಿಲ್ಲೆಯ ಹಿತದೃಷ್ಟಿಯಿಂದ, ವಿದ್ಯಾರ್ಥಿ-ಯುವಜನರ ಭವಿಷ್ಯದ, ಅಂಕಪಟ್ಟಿ ಬದಲಾವಣೆ ದೃಷ್ಟಿಯಿಂದ ಲೋಗೋ ಬದಲಾವಣೆ ಕುರಿತು ತಮ್ಮ ತಮ್ಮ ನಿಲವು ಸ್ಪಷ್ಟಪಡಿಸಬೇಕು.
ಲಾಂಛನ ಬದಲಾಗಿದ್ದು, ಬಿಜೆಪಿ ಸರ್ಕಾರದ ಆಡಳಿತದ ಅವಧಿಯ ವೇಳೆ. ಮೊದಲು ಬಿಜೆಪಿ ಸರ್ಕಾರ ಲೋಗೋ ಬದಲಾವಣೆ ಕುರಿತಂತೆ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಎಸ್ಎಫ್ಐ, ಡಿವೈಎಫ್ಐ, ತುಮಕೂರು ವಿವಿ ಲಾಂಛನ ಹೋರಾಟ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ.