ಜೆಡಿಎಸ್ ಬಲವರ್ಧನೆಗೆ ನಾಗರಾಜಯ್ಯ ಪ್ರವಾಸ
ಕ.ಪ್ರ.ವಾರ್ತೆ ಕುಣಿಗಲ್ ಏ.8
ಕುಣಿಗಲ್ ಕ್ಷೇತ್ರದ ಜೆಡಿಎಸ್ ಟಿಕೆಟ್ ಯಾರಿಗೆ ಎಂಬ ಉತ್ತರ ಇನ್ನೂ ಸ್ಪಷ್ಟವಾಗದಿದ್ದರೂ, ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಡಿ.ನಾಗರಾಜಯ್ಯ ಸೋಮವಾರ ಪಕ್ಷದ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಲು ಅಮೃತೂರು ಹೋಬಳಿಯ 23 ಹಳ್ಳಿಗಳಲ್ಲಿ ಪ್ರವಾಸ ಕೈಗೊಂಡರು.
ಬೆಟ್ಟಹಳ್ಳಿಯಲ್ಲಿ ಈ ಹಿಂದೆ ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಶೇಖರ್, ವೆಂಕಟೇಶ್, ಕಾಂಗ್ರೆಸ್ನಲ್ಲಿದ್ದ ನರಸಿಂಹಯ್ಯ ಇತರರು ಮಾಜಿ ಸಚಿವರ ನೇತೃತ್ವದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು. ಗ್ರಾಮಸ್ಥರನ್ನುದ್ದೇಶಿಸಿ ಮಾತನಾಡಿದ ಮಾಜಿ ಸಚಿವರು, ಅಲ್ಪಾವಧಿಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಕುಮಾರಸ್ವಾಮಿ ನೀಡಿರುವ ಹಲವು ಜನಪರ ಕಾರ್ಯಕ್ರಮಗಳು ಶಾಶ್ವತವಾಗಿ ಜನತೆಯ ಮನದಲ್ಲಿ ಛಾಪು ಮೂಡಿಸಿವೆ. ರಾಜ್ಯದ ಸಮಗ್ರ ಅಭಿವೃದ್ಧಿ ಜೆಡಿಎಸ್ನಿಂದ ಮಾತ್ರ ಸಾಧ್ಯ. ರಾಜ್ಯವನ್ನಾಳಿದ ಇತರ ಯಾವ ಪಕ್ಷಗಳು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಂಡಿಲ್ಲ. ಮತ್ತೊಂದು ಅವಧಿಗೆ ಕುಮಾರಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ದಿಸೆಯಲ್ಲಿ ಪಕ್ಷದ ಎಲ್ಲ ಕಾರ್ಯಕರ್ತರು ಬದ್ಧತೆಯಿಂದ ಶ್ರಮಿಸಬೇಕು ಎಂದರು.
ಅಮೃತೂರು ಜಿಪಂ ಸದಸ್ಯ ಡಾ. ಬಿ.ಎನ್.ರವಿ, ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್, ಮುಖಂಡರಾದ ಭೈರಪ್ಪ, ಸುರೇಶ್, ಶೇಷ, ನರಸಿಂಹಯ್ಯ, ರಮೇಶ್, ನಾಗರಾಜ್, ಕೃಷ್ಣಪ್ಪ, ರಂಗಸ್ವಾಮಿ, ತಾಪಂ ಸದಸ್ಯ ಜಗದೀಶ್ ಇತರರಿದ್ದರು. ಅಮೃತೂರು ಹೋಬಳಿ ವ್ಯಾಪ್ತಿಯಲ್ಲಿ ನಾಗರಾಜಯ್ಯ ಮಂಗಳವಾರವೂ ಪ್ರವಾಸ ಕೈಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.