ಪಕ್ಷೇತರರಾಗಿ ಸ್ಪರ್ಧಿಸದಿರಲು ರವಿಕಿರಣ್ಗೆ ಕೈ ಕಾರ್ಯಕರ್ತರ ಆಗ್ರಹ
ಕ.ಪ್ರ.ವಾರ್ತೆ ಕುಣಿಗಲ್ ಏ.8
ಪಕ್ಷದ ಅಧಿಕೃತ ಬಿಫಾರಂ ಯಾರಾದರೂ ತನ್ನಿ. ಹಗಲಿರುಳು ಶ್ರಮಿಸಿ, ಅವರನ್ನು ಗೆಲ್ಲಿಸಲು ಹೋರಾಡುತ್ತೇವೆ. ಆದು ಬಿಟ್ಟು ಪಕ್ಷದಲ್ಲಿ ಗೊಂದಲ ಮಾಡಿ, ಬಂಡಾಯ ನಿಂತು ಪಕ್ಷೇತರರಾಗಿ ಸ್ಪರ್ಧಿಸಿ ಪಕ್ಷಕ್ಕೆ ತೊಂದರೆ ಮಾಡಬೇಡಿ ಎಂದು ಕಾಂಗ್ರೆಸ್ ಕಾರ್ಯಕರ್ತರು, ಉದ್ಯಮಿ ರವಿಕಿರಣ್ ಗೃಹಕಚೇರಿಗೆ ಮುತ್ತಿಗೆ ಹಾಕಿ ಆಗ್ರಹಿಸಿದ ಘಟನೆ ಸೋಮವಾರ ನಡೆಯಿತು.
ಕಾಂಗ್ರೆಸ್ ಟಿಕೆಟ್ ವಂಚಿತರಾದ ಕಾರಣ ಉದ್ಯಮಿ ರವಿಕಿರಣ್ ಭಾನುವಾರ ಸುದ್ದಿಗೋಷ್ಠಿ ಕರೆದು ಪಕ್ಷೇತರರಾಗಿ ಕಣದಲ್ಲಿ ಉಳಿಯುವುದಾಗಿ ಘೋಷಿಸಿದ್ದರು. ರವಿಕಿರಣ್ ಹೇಳಿಕೆಯಿಂದ ವಿಚಲಿತರಾದ ಕಾಂಗ್ರೆಸ್ ಕಾರ್ಯಕರ್ತರು, ರವಿಕಿರಣ್ ನಿಲುವನ್ನು ಖಂಡಿಸಿದರು. ಮೇಲ್ನೋಟಕ್ಕೆ ರವಿಕಿರಣ್ ಪಕ್ಷೇತರರಾಗಿ ಕಣದಲ್ಲಿ ಉಳಿದರೂ, ಇದರ ಪರಿಣಾಮ ಕಾಂಗ್ರೆಸ್ ಮೇಲಾಗುವುದರಿಂದ, ಕಾಂಗ್ರೆಸ್ ಕಾರ್ಯಕರ್ತರಾದ ಶಿವಣ್ಣಗೌಡ, ರಂಗಸ್ವಾಮಿ, ಏಜಾಸ್ಪಾಶ ಇತರರು, ಉದ್ಯಮಿ ರವಿಕಿರಣ್ ಗೃಹಕಚೇರಿಗೆ ತೆರಳಿದರು. ನಂತರ ಮಾತನಾಡಿ, ತಾಲೂಕಿನಲ್ಲಿ ಪಕ್ಷದ ಚಟುವಟಿಕೆ ಪ್ರಾರಂಭಿಸಬೇಕಾದರೆ ಮುಂದಿನ ದಿನಗಳಲ್ಲಿ ಬಿಫಾರಂ ಯಾರಿಗೆ ನೀಡುತ್ತಾರೋ, ಅವರ ಗೆಲುವಿಗೆ ಶ್ರಮಿಸುತ್ತೇನೆಂದು ಹೇಳಿದ್ದು, ಈಗ ಪಕ್ಷೇತರರಾಗಿ ಕಣಕ್ಕಿಳಿಯುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ರವಿಕಿರಣ್ ತಮ್ಮ ನಿರ್ಧಾರ ಕೈ ಬಿಟ್ಟು, ಕೈಪಾಳೆಯದ ಅಧಿಕೃತ ಅಭ್ಯರ್ಥಿಗೆ ಬೆಂಬಲಿಸಬೇಕು. ಇಲ್ಲವಾದರೇ ನೀವೇ ಬಿಫಾರಂ ತಂದರೂ ನಿಮಗೆ ನಾವು ಕೆಲಸ ಮಾಡುತ್ತೇವೆ. ಅದು ಬಿಟ್ಟು ಪಕ್ಷವನ್ನು ವಿನಾ ಕಾರಣ ಅತಂತ್ರಗೊಳಿಸಬೇಡಿ ಎಂದು ಆಗ್ರಹಪೂರ್ವಕ ಮನವಿ ಮಾಡಿದರು.
ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಗೃಹಕಚೇರಿಗೆ ಮುತ್ತಿಗೆ ಹಾಕಿದ್ದರಿಂದ ಕೆಲ ಕಾಲ ಗೊಂದಲಕ್ಕೊಳಗಾದ ರವಿಕಿರಣ್, ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಮಾತಿನ ಚಕಮಕಿ ನಡೆಸಿದರು. ನಂತರ, ತಮಗೂ ಬೆಂಬಲಿಗರು, ಅಭಿಮಾನಿಗಳು, ಕಾರ್ಯಕರ್ತರಿದ್ದು, ಅವರೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿದರು. ಬಂದ ದಾರಿಗೆ ಸುಂಕವಿಲ್ಲದಂತೆ ಕಾಂಗ್ರೆಸ್ ಕಾರ್ಯಕರ್ತರು ಹಿಂತಿರುಗಿದರು. ಕಾಂಗ್ರೆಸ್ ಕಾರ್ಯಕರ್ತರ ಧೋರಣೆಯನ್ನು ರವಿಕಿರಣ್ ಬೆಂಬಲಿಗರು ಖಂಡಿಸಿದ್ದು, ರವಿಕಿರಣ್ ಏಳಿಗೆ ಸಹಿಸಲಾರದೆ ವಿಚಲಿತರಾಗಿ ಕಾಂಗ್ರೆಸ್ ಕಾರ್ಯಕರ್ತರು, ರವಿಕಿರಣ್ ಚುನಾವಣೆಗೆ ನಿಲ್ಲದಂತೆ ತಡೆಯಲು ಮುಂದಾಗಿರುವುದು ನಿಜಕ್ಕೂ ಖಂಡನೀಯ ಎಂದಿದ್ದಾರೆ.