ಮರ್ಲಿನ್ ಆತ್ಮಹತ್ಯೆ ಸಿಬಿಐ ತನಿಖೆ ಆಗಲಿ
ತುಮಕೂರು: ಸ್ವೀಟಿ ಮರ್ಲಿನ್ ಆತ್ಮಹತ್ಯೆಗೆ ಕಾರಣನಾದ ಆರೋಪಿಯನ್ನು ಬಂಧಿಸುವಲ್ಲಿ ಮೀನಮೇಷ ಎಣಿಸುತ್ತಿರುವುದನ್ನು ಮತ್ತು ತನಿಖೆ ಚುರುಕುಗೊಳಿಸದೇ ಇರುವ ಪೊಲೀಸ್ ಮತ್ತು ಸರ್ಕಾರದ ಕ್ರಮವನ್ನು ಜಿಲ್ಲೆಯ ಪ್ರಗತಿಪರ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಈ ಪ್ರಕರಣದ ತನಿಖೆಯನ್ನು ಸಿಒಡಿ ಅಥವಾ ಸಿಬಿಐಗೆ ವಹಿಸುವಂತೆ ಪ್ರಗತಿಪರ ಸಂಘಟನೆಗಳು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಪತ್ರ ಸಲ್ಲಿಸಿವೆ. ಕಳೆದ ತಿಂಗಳ 27ರಂದು ಕ್ಯಾಮೆರಾಮನ್ ಭಾರ್ಗವನ ಕಿರುಕುಳದಿಂದ ನನ್ನ ಮಗಳು ಸ್ವೀಟಿ ಮರ್ಲಿನ್ ಆತ್ಮಹತ್ಯೆ ಮಾಡಿಕೊಂಡಿದ್ದು ಭಾರ್ಗವನನ್ನು ಬಂಧಿಸುವಂತೆ ತಿಲಕ್‌ಪಾಕ್ ದೂರು ನೀಡಿದ್ದರೂ ಇದುವರೆಗೂ ಆರೋಪಿಯನ್ನು ಬಂಧಿಸುವ ಯಾವುದೇ ಯತ್ನಗಳು ನಡೆಯದೇ ಇರುವುದು ಅನೇಕ ಅನುಮಾನಗಳಿಗೆ ಎಡೆ ಮಾಡಿದೆ ಎಂದು ಸಂಘಟನೆಗಳು ಹೇಳಿದವು. ಪಿಯುಸಿಎಲ್ ಅಧ್ಯಕ್ಷರಾದ ಪ್ರೊ.ಕೆ.ದೊರೈರಾಜು, ವರದಕ್ಷಿಣೆ ವಿರೋಧಿ ವೇದಿಕೆ ಕಾರ್ಯದರ್ಶಿ ಸಾ.ಚಿ. ರಾಜ್‌ಕುಮಾರ್ ಈ ಸಂದರ್ಭದಲ್ಲಿ ಇದ್ದರು.