ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ರಾತ್ರೋರಾತ್ರಿ ರೇಲ್ವೆ ಮೇಲ್ಸೇತುವೆ ಮುಕ್ತ

Rashmi Kasaragodu
Updated On : 9 Apr 2013, 12:26 pm

ಕ.ಪ್ರ.ವಾರ್ತೆ   ತುಮಕೂರು   ಏ.8
ಶೆಟ್ಟಿಹಳ್ಳಿ ಉಪ್ಪಾರಹಳ್ಳಿ ಮೇಲ್ಸೇತುವೆ ಅಧಿಕೃತವಾಗಿ ಸೋಮವಾರ ರಾತ್ರಿಯಿಂದಲೇ ಸಾರ್ವಜನಿಕರ ಪ್ರವೇಶಕ್ಕೆ ಮುಕ್ತವಾಗಿದೆ.
ನೀತಿ ಸಂಹಿತೆ ಇರುವುದರಿಂದ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳದೇ ವಾಹನಗಳ ಸಂಚಾರಕ್ಕೆ ಪ್ರವೇಶ ಕಲ್ಪಿಸಲಾಯಿತು. ದಶಕದಿಂದ ಕನವರಿಸಿದ ಮಹತ್ವಾಕಾಂಕ್ಷಿ ಯೋಜನೆ ಕಡೆಗೂ ಸಾರ್ವಜನಿಕರಿಗೆ ಮುಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ಸ್ಥಳೀಯರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ರಾತ್ರಿಯಿಂದಲೇ ವಾಹನಗಳು ಮೇಲ್ಸೇತುವೆ ಮೇಲೆ ಓಡಾಡಿದವು. ತುಮಕೂರು ನಗರದ ಶೇ. 50 ಕ್ಕೂ ಹೆಚ್ಚು ಮಂದಿ ಮೇಲ್ಸೇತುವೆ ಆಚೆ ಬದಿಯಲ್ಲಿ ವಾಸಿಸುತ್ತಿದ್ದಾರೆ. ಪ್ರತಿ ದಿನ ಕನಿಷ್ಠ ಈ ಮಾರ್ಗದಲ್ಲಿ 58 ರೈಲುಗಳ ಸಂಚಾರ ಇದೆ. ಈ ಹಿನ್ನೆಲೆಯಲ್ಲಿ ಸವಾರರು ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದರು. 3 ತಿಂಗಳಿಂದ ಈ ಕಾಮಗಾರಿ ತೀವ್ರಗತಿಯಲ್ಲಿ ನಡೆದಿತ್ತು. ಇನ್ನೇನು ದೊಡ್ಡ ಸಮಾರಂಭ ಮಾಡಿ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಬೇಕು ಎನ್ನುವಾಗ ನೀತಿಸಂಹಿತೆ ಜಾರಿಯಾಯಿತು.
15 ದಿನದಿಂದ ಮೇಲ್ಸೇತುವೆಗೆ ಟಾರ್ ಹಾಕುವ ಕಾರ್ಯ ಭರದಿಂದ ಸಾಗಿತ್ತು. ಈ ಮಧ್ಯೆ ಸಂಪೂರ್ಣವಾಗಿ ಕನೆಕ್ಟಿಂಗ್ ರಸ್ತೆ ಮಾಡುವವರೆಗೂ ಸಂಚಾರ ಮುಕ್ತ ಮಾಡಬಾರದೆಂದು ಹೋರಾಟ ಸಮಿತಿಯವರು ಎಚ್ಚರಿಕೆ ನೀಡಿದ್ದರು. ಆದರೆ ಸೋಮವಾರ ರಾತ್ರಿ ತರಾತುರಿಯಲ್ಲಿ ವಾಹನಗಳಿಗೆ ಮುಕ್ತ ಸಂಚಾರ ನೀಡಲಾಯಿತು.
ನಿರಂತರ ವಿವಾದ: ಯೋಜನೆ ಆರಂಭದಿಂದಲೂ ವಿವಾದವನ್ನೇ ಹೊತ್ತು ಬಂದಿತ್ತು. ಮೊದಲು ಒತ್ತುವರಿ ಸಮಸ್ಯೆಯಿಂದ ಆರಂಭವಾದ ವಿವಾದ ಮುಕ್ತ ಸಂಚಾರದವರೆಗೂ ಮುಂದುವರಿಯಿತು. ಸ್ವತಃ ತುಮಕೂರಿನ ಶಾಸಕರೇ ರೇಲ್ವೆ ಹಳಿ ಮೇಲೆ ಕುಳಿತು ಪ್ರತಿಭಟನೆ ಮಾಡುವ ಹಂತಕ್ಕೆ ಬಂದಿತ್ತು. ರೇಲ್ವೆ ಇಲಾಖೆ, ರಾಜ್ಯ ಸರ್ಕಾರ, ಲೋಕೋಪಯೋಗಿ ಇಲಾಖೆ ಸಹಯೋಗದಲ್ಲಿ ಈ ಮಹತ್ವಾಕಾಂಕ್ಷಿ ಯೋಜನೆ ಕೈಗೊಳ್ಳಲಾಗಿತ್ತು.
40 ಕೋಟಿಗೆ ಏರಿತು: ಆರಂಭದಲ್ಲಿ 3 ಕೋಟಿ ವೆಚ್ಚದಲ್ಲಿ ಈ ಯೋಜನೆ ಪೂರ್ಣಗೊಳಿಸಬೇಕು ಎಂದಿತ್ತು. ಆದರೆ ನಿರಂತರ ವಿವಾದದಿಂದಾಗಿ 10 ವರ್ಷದ ತನಕ ಈ ಕಾಮಗಾರಿ ಎಳೆಯಿತು. ಜತೆಗೆ ಹನುಮಂತನ ಬಾಲದ ರೀತಿ ಹಣ ಕೂಡ ಖರ್ಚಾಯಿತು. ಈಗ ಭರ್ತಿ 40 ಕೋಟಿ ವೆಚ್ಚವಾಗಿದೆ. ಕಡೆಗೂ ಯೋಜನೆ ಮುಗಿಯುವ ಮೂಲಕ ದಶಕದ ಕನಸು ಈಡೇರಿದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement