ಏತ ನೀರಾವರಿ ಹೋರಾಟ ನನ್ನದು, ಹಣ ಬಿಎಸ್ವೈ ನೀಡಿದ್ದು
ಕ.ಪ್ರ.ವಾರ್ತೆ ತುಮಕೂರು ಏ.9
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನುಡಿದಂತೆ ನಡೆಯುವ ವ್ಯಕ್ತಿ. ಪಕ್ಷಕ್ಕೆ ಸೇರ್ಪಡೆಯಾದಲ್ಲಿ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರು. ಅದರಂತೆ ಕೇವಲ ಅರ್ಧ ಗಂಟೆಯಲ್ಲೇ ತುಮಕೂರು ಗ್ರಾಮಾಂತರಕ್ಕೆ ಟಿಕೆಟ್ ನೀಡಿದರು ಎಂದು ಇತ್ತೀಚೆಗೆ ಜೆಡಿಎಸ್ ತೊರೆದು ಕೆಜೆಪಿ ಸೇರಿದ ಎಚ್. ನಿಂಗಪ್ಪ ತಿಳಿಸಿದರು.
ಅವರು ತುಮಕೂರು ಗ್ರಾಮಾಂತರದ ಗೂಳೂರಿನಲ್ಲಿ ನಡೆದ ಕೆಜೆಪಿ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಭೇಟಿಯಾಗಿ ಟಿಕೆಟ್ ಕೇಳಿದೆ. ದೇವೇಗೌಡರು ಹೇಳಿದರು, ಯಾರ್ಯಾರ ಯೋಗ್ಯತೆ ಏನು ಅಂತ ಗೊತ್ತಿದೆ. ಮೊದಲು ಕೆಲಸ ಮಾಡು ಅಂದರು. ಕೆಲಸವನ್ನೇನೋ ನಿರಂತರವಾಗಿ ಶ್ರದ್ಧೆಯಿಂದ ಮಾಡುತ್ತಲೇ ಬಂದೆ. ಆದರೆ ಚನ್ನಿಗಪ್ಪನವರ ಪುತ್ರ ಗೌರಿಶಂಕರ್ ನೋಡಿದ ಮೇಲೆ ನಾನು ಯೋಗ್ಯ ಅಲ್ಲ ಅನ್ನಿಸಿತು. ಜೆಡಿಎಸ್-ಬಿಜೆಪಿಯಿಂದ ಅನ್ಯಾಯಕ್ಕೊಳಗಾದ ಬಿಎಸ್ವೈ ನನಗೆ ಸೂಕ್ತ ನಾಯಕ ಅನ್ನಿಸಿತು. ತೀರ್ಮಾನಕ್ಕೆ ಬಂದೆ. ಮರ್ಯಾದೆಯಿಂದ ಕರೆದು ಟಿಕೆಟ್ ಕೊಡುವ ಪಕ್ಷಕ್ಕೆ ಸೇರುವುದಾಗಿ ಹೇಳಿದ್ದೆ. ಅದರಂತೆ ಮರ್ಯಾದೆಯಿಂದ ನಡೆಸಿಕೊಂಡ ಕೆಜೆಪಿಗೆ ಸೇರಿದೆ. ಯಡಿಯೂರಪ್ಪ ಹೇಳಿದಂತೆ ಕೇವಲ ಅರ್ಧ ಗಂಟೆಯಲ್ಲೇ ಟಿಕೆಟ್ ನೀಡಿದರು. ನುಡಿದಂತೆ ನಡೆದರು ಎಂದು ಶ್ಲಾಘಿಸಿದರು.
20 ವರ್ಷ ಹೋರಾಟ: ಹೆಬ್ಬೂರು - ಗೂಳೂರು ಏತ ನೀರಾವರಿ ಯೋಜನೆಗೆ ಕಳೆದ 20 ವರ್ಷಗಳಿಂದ ಹೋರಾಟ ನಡೆಸುತ್ತಲೇ ಬಂದೆ. ಆದರೆ ತಾವು ಶಾಸಕರಾಗಿದ್ದ ಅವಧಿಯಲ್ಲಿ ತಾಂತ್ರಿಕ ಕಾರಣ, ಹಾಗೂ ಸರ್ಕಾರ ಬಿದ್ದು ಹೋಗಿ, ಶಾಸಕಗಿರಿ ಅರ್ಧದಲ್ಲೇ ಮೊಟಕುಗೊಂಡ ಕಾರಣದಿಂದಾಗಿ ತಮ್ಮ ಅವಧಿಯಲ್ಲಿ ಈ ನೀರಾವರಿ ಯೋಜನೆ ಜಾರಿಯಾಗಲಿಲ್ಲ. ಆದರೆ ಯೋಜನೆ ಜಾರಿಗೆ ಸಂಪೂರ್ಣ ಅಖಾಡ ಸಿದ್ಧಪಡಿಸಿದ್ದು ತಾವು. ಈ ನೀರಾವರಿ ಯೋಜನೆಗೆ ಹೋರಾಟ ತಮ್ಮದು. ಹಣ ಮಂಜೂರು ಮಾಡಿದ್ದು ಯಡಿಯೂರಪ್ಪನವರು ಎಂಬುದನ್ನು ಮರೆಯಲಾಗದು ಎಂದರು.
ಸ್ವಾರ್ಥಿಗಳು: ತುಮಕೂರು ಗ್ರಾಮಾಂತರ ಶಾಸಕ ಸುರೇಶ್ಗೌಡರಿಗೆ ಹೆಸರು ಬಂದಿದ್ದೇ ಯಡಿಯೂರಪ್ಪನವರ ಅಭಿವೃದ್ಧಿ ಕಾರ್ಯಗಳಿಂದ. ವಿಶೇಷವಾಗಿ ಹೆಬ್ಬೂರು - ಗೂಳೂರು ಏತ ನೀರಾವರಿ ಯೋಜನೆ ಅನುಷ್ಠಾನದಿಂದ. ಆದರೆ ಸ್ವಾರ್ಥಿ ಸುರೇಶ್ಗೌಡ ತಮ್ಮ ಹೆಸರನ್ನು ಎಲ್ಲೂ ಹೇಳಲಿಲ್ಲ. ಯಡಿಯೂರಪ್ಪನವರು ಮಾಡಿದ ಸಹಾಯವನ್ನು ಸ್ಮರಿಸಲಿಲ್ಲ. ಅವರೊಬ್ಬ ನಂಬಿಕೆ ದ್ರೋಹಿ. ವಚನಭ್ರಷ್ಟ ಎಂದು ನಿಂಗಪ್ಪ ಟೀಕಿಸಿದರು.
ಇಲ್ಲಿಯವನೇ: ತಾವು ಸುರೇಶ್ಗೌಡ, ಗೌರಿಶಂಕರ್, ಯಲಚವಾಡಿ ನಾಗರಾಜ್ ಹಾಗೆ ಹೊರಗಿನವನಲ್ಲ. ಸ್ಥಳೀಯ ವ್ಯಕ್ತಿ. ಯಾವಾಗ ಬೇಕಾದರೂ ಸಿಗುವ ವ್ಯಕ್ತಿ. ಇದೇ ಊರಿನವನು. ವಕೀಲನಾಗಿ 28 ವರ್ಷ ಸೇವೆ ಮಾಡಿದವನು. ಕಕ್ಷಿದಾರರಿಗೆ ಹಣಕ್ಕಾಗಿ ಪೀಡಿಸಿದವನಲ್ಲ. ಪ್ರಾಮಾಣಿಕನಾಗಿ ದುಡಿದವನು ಎಂದು ತಮ್ಮ ಹಳೆ ನೆನಪುಗಳನ್ನು ಬಿಚ್ಚಿಟ್ಟರು.