ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಪಾಂಡುರಂಗ ರೆಡ್ಡಿ ಗುಡ್ಬೈ

Rashmi Kasaragodu
Updated On : 10 Apr 2013, 12:43 pm

ಕ.ಪ್ರ.ವಾರ್ತೆ   ಮಧುಗಿರಿ   ಏ.9
ಟಿಕೆಟ್ ಹಂಚಿಕೆ ವಿಚಾರದಲ್ಲಿ ಸ್ಥಳೀಯ ಮುಖಂಡರು,ಕಾರ್ಯಕರ್ತರನ್ನು  ಲೆಕ್ಕಕ್ಕೆ ತೆಗೆದುಕೊಳ್ಳದೇ ನಿರ್ಲಕ್ಷಿಸಿರುವ ಕಾರಣ  ಬಿಜೆಪಿ ವರಿಷ್ಠರ ಕಾರ್ಯ ವೈಖರಿಗೆ ಬೇಸತ್ತು  ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಮತ್ತು  ಪ್ರಾಥಮಿಕ ಸದಸ್ಯತ್ವ ಸ್ಥಾನಕ್ಕೆ  ರಾಜಿನಾಮೆ ನೀಡುತ್ತಿರುವುದಾಗಿ  ಕೆ.ಎಸ್.ಪಾಂಡುರಂಗಾರೆಡ್ಡಿ ತಿಳಿಸಿದರು.
ಪಟ್ಟಣದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಪತ್ರಿಕಾಗೋಷ್ಠಿ ಕರೆದು ಈ ವಿಷಯ ತಿಳಿಸಿದ ಅವರು, ಮೇ 5ರಂದು ನಡೆಯಲಿರುವ  ಮಧುಗಿರಿ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯ ಮುಖಂಡರಾದ ಡಾ.ಜಿ.ಕೆ. ಜಯರಾಮ್, ನಾಗಭೂಷಣರೆಡ್ಡಿ, ಬಿ.ಎನ್.ಲಕ್ಷ್ಮೀಪತಿ, ಗೋಪಾಲಕೃಷ್ಣೇಗೌಡ ಮತ್ತು ಕೆಎಸ್ಪಿ ರೆಡ್ಡಿ ಆಕಾಂಕ್ಷಿಗಳಾಗಿದ್ದೇವೆ ಎಂದು ಜಿಲ್ಲಾ ಸಮಿತಿಗೆ ಶಿಫಾರಸು ಮಾಡಿದ್ದೆವು. ಆದರೆ ಬಿಜೆಪಿ ವರಿಷ್ಠರು ಸ್ಥಳೀಯ ಮುಖಂಡರನ್ನು ಗಣನೆಗೆ ತೆಗೆದುಕೊಳ್ಳದೇ ನಿರ್ಲಕ್ಷಿಸಿ ಸ್ಥಳೀಯರಲ್ಲದ ಮಹಿಳೆಯೊಬ್ಬರಿಗೆ ಟಿಕೆಟ್ ನೀಡಿರುವ ಹಿನ್ನೆಲೆಯಲ್ಲಿ ಬೇಸತ್ತು ಕೆಲ ಪದಾಧಿಕಾರಿಗಳು ಸೇರಿದಂತೆ ಸಾಮೂಹಿಕವಾಗಿ ರಾಜಿನಾಮೆ ನೀಡಿರುವುದಾಗಿ ಪಾಂಡುರಂಗಾರೆಡ್ಡಿ ತಿಳಿಸಿದರು.
ಪರಿಚಯವಿಲ್ಲ: ತಾಲೂಕಿನ ಜನರ ಮುಖ ಪರಿಚಯವಿಲ್ಲ, ಅಂತವರು ಕಳೆದ 3 ತಿಂಗಳಿಂದ ಮಧುಗಿರಿ ಕ್ಷೇತ್ರಕ್ಕೆ ನಾನೇ ಬಿಜೆಪಿ ಅಭ್ಯರ್ಥಿ ಎಂದು ಹೇಳಿಕೊಂಡು ಕ್ಷೇತ್ರದಲ್ಲಿ ಓಡಾಡಿದರೆ ಹೊರತು ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಗೆ 5 ಮಂದಿ ಮಹಿಳಾ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಕೂಡ ಒಂದು ದಿನ ಕೂಡ ಪ್ರಚಾರಕ್ಕೆ ಬರಲಿಲ್ಲ. ಇಂಥವರು ಅಭ್ಯರ್ಥಿಯಾದರೆ ಜನರ ಮುಂದೆ ಹೋಗಿ ಮತ ಕೇಳುವುದಾದರು ಹೇಗೆ ಎಂದು ಕಿಡಿಕಾರಿದ ರೆಡ್ಡಿ, ಜಿಲ್ಲಾ ಉಸ್ತುವಾರಿ ಮಂತ್ರಿ ಇದ್ದರೂ ಮಧುಗಿರಿ ಅಭಿವೃದ್ಧಿ ಬಗ್ಗೆ ಆಗಲಿ, ಪಕ್ಷ ಸಂಘಟನೆ ಬಗ್ಗೆ ಆಗಲಿ ಗಮನ ಕೊಡಲಿಲ್ಲ ಎಂದು ಸೊಗಡು ಶಿವಣ್ಣ ಅವರ ಹೆಸರು ಪ್ರಸ್ತಾಪಿಸದೇ  ಆರೋಪಿಸಿದರು.
ಮುಖಂಡ ಆರ್.ಸಿ. ವಿಜಯ್ ಕುಮಾರ್ ಜೈನ್ ಮಾತನಾಡಿ, ಕಳೆದ 5 ವರ್ಷಗಳ ಹಿಂದೆ ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯ ಅಭಿವೃದ್ಧಿ ಹೊಂದುತ್ತದೆ ಎಂದು ನಿರೀಕ್ಷೆ ಇಟ್ಟಿದ್ದೆವು. ಆದರೆ ಜನರ ನಂಬಿಕೆ ಉಳಿಸಿಕೊಳ್ಳಲಾಗದೇ 3 ಜನ ಸಿಎಂ ಕಂಡು ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂಬ ಆರೋಪದಿಂದ ಬೇಸತ್ತು ರಾಜಿನಾಮೆ ನೀಡುತ್ತಿರುವುದಾಗಿ ತಿಳಿಸಿದರು.
ತಾಲೂಕು ಬಿಜೆಪಿ ಉಪಾಧ್ಯಕ್ಷ ಕೃಷ್ಣಮೂರ್ತಿ, ಮಹಿಳಾ ಉಪಾಧ್ಯಕ್ಷೆ ಕಮಲಾರೆಡ್ಡಿ, ಸುಮಾ, ಶಾಂತರಾಜ್ ರೆಡ್ಡಿ, ಯುವ ಬಿಜೆಪಿ ಘಟಕದ ಅಧ್ಯಕ್ಷ ಪರಶುರಾಮ್, ಕಾರ್ಯದರ್ಶಿ
ರಘುನಾಥ್ ರೆಡ್ಡಿ, ಮಂಜುನಾಥ್, ದೊಡ್ಡೇರಿ ಶಕ್ತಿ ಕೇಂದ್ರದ ಅಧ್ಯಕ್ಷ ಬಿ.ರಂಗನಾಥ್, ಕಾರ್ಯದರ್ಶಿ ಪ್ರಕಾಶ್, ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷ ರವಿಕುಮಾರ್, ಲಕ್ಷ್ಮೀನಾರಾಯಣಪ್ಪ ಸೇರಿದಂತೆ ಅನೇಕ ಪದಾಧಿಕಾರಿಗಳು ಪಕ್ಷದ ಜಿಲ್ಲಾಧ್ಯಕ್ಷ ಶಿವಪ್ರಸಾದ್ ಅವರಿಗೆ ರಾಜಿನಾಮೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement