ಹೋರಾಡುವ ಶಕ್ತಿಯಿದೆ, ಅವಕಾಶ ಕೊಡಿ: ಮಾಧುಸ್ವಾಮಿ
ಕ.ಪ್ರ.ವಾರ್ತೆ ಹುಳಿಯಾರ್ಣು ಏ.9
ಕ್ಷೇತ್ರದ ಹಾಲಿ ಶಾಸಕರು ಯಾವುದೇ ಸಮಸ್ಯೆ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮಗೂ ಹೋರಾಟಗಳಿಗೂ ಸಂಬಂಧವಿಲ್ಲ ಎಂಬಂತೆ ಇರುವುದನ್ನು ಕಂಡಿದ್ದು, ನನಗೆ ಹೋರಾಟ ಮಾಡುವ ಶಕ್ತಿಯಿದೆ. ನನ್ನನ್ನು ಈ ಬಾರಿ ಗೆಲ್ಲಿಸುವ ಮೂಲಕ ಸದನದಲ್ಲಿ ನಿಮ್ಮಗಳ ಧ್ವನಿಯಾಗಲು ಅವಕಾಶ ಮಾಡಿಕೊಡಿ ಎಂದು ಚಿ.ನಾ.ಹಳ್ಳಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಮಾಧುಸ್ವಾಮಿ ನುಡಿದರು.
ಹುಳಿಯಾರು ಸಮೀಪದ ಚಿಕ್ಕಬಿದರೆಯಲ್ಲಿ ಆಯೋಜಿಸಿದ್ದ ಕೆಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿ, ಎಂಎಲ್ಎ ಸ್ಥಾನವನ್ನು ಯಾವುದೊ ಒಂದು ಊರು, ಹೋಬಳಿ, ಕ್ಷೇತ್ರಕ್ಕೆ ಮಾತ್ರ ಸೀಮಿತ ಮಾಡಬೇಡಿ. ನಮಗೆಲ್ಲಾ ಗೆಲ್ಲುವುದಕ್ಕೆ ಒಂದು ಕ್ಷೇತ್ರ, ಗೆದ್ದ ನಂತರ ಇಡಿ ರಾಜ್ಯಕ್ಕೆ ನಾವು ಶಾಸಕರಾಗುತ್ತೇವೆ. ರಾಜ್ಯಕ್ಕೆ ಮಾರಕವಾಗುವಂತ ಕಾರ್ಯಗಳ ವಿರುದ್ಧ ಹೋರಾಟಕ್ಕೆ ಮುಂದಾಗಬೇಕಿದೆ ಎಂದರು.
ತಾವು ಸದನದಲ್ಲಿದ್ದಾಗ ಪ್ರತಿಬಿಲ್ ಪಾವತಿಸಲು ತಮ್ಮ ಕಡೆ ನೋಡಿ ನಂತರ ಅದನ್ನು ಪಾಸ್ ಮಾಡುತ್ತಿದ್ದರು. ಯಾವುದೇ ಒಂದು ಕಾನೂನು, ಬಿಲ್ಗಳನ್ನು ಪಾಸ್ ಮಾಡುವಲ್ಲಿ ಅದರ ಸಮಗ್ರ ಮಾಹಿತಿ ಪಡೆಯಲು ಗಂಟೆಗಟ್ಟಲೇ ಚರ್ಚೆ ನಡೆಸುತ್ತಿದ್ದೆವು. ಆದರೆ ಈಗ ಪ್ರಶ್ನೆ ಮಾಡುವವರೇ ಇಲ್ಲದಂತಾಗಿದ್ದು,ನಿಮಿಷಗಳಲ್ಲೇ ಬಿಲ್ಗಳು ಪಾಸ್ ಆಗುತ್ತಿವೆ. ಇದರಿಂದ ರಾಜ್ಯಕ್ಕೆ ನಷ್ಟ ಸಂಭವಿಸುತ್ತಿದೆ ಎಂದರು.
ಇಂದು ಸರ್ಕಾರಿ ಅಧಿಕಾರಿಗಳು ಮಾಡುವ ತಪ್ಪಿಗೆ ಸಾಮನ್ಯ ಜನ ಸರ್ಕಾರಿ ಕಚೇರಿಗಳ ಬಾಗಿಲಿಗೆ ಅಲೆಯುವಂತಾಗಿದೆ. ರೈತರಿಗಾಗುವ ಅನ್ಯಾಯವನ್ನು ತಡೆಯಲು ಸಮರ್ಥರು ಬೇಕಿದೆ. ಯಾರಿಗೆ ಮತ ನೀಡಿದರೆ ತಮಗೆ ಉತ್ತಮ ಆಡಳಿತ ದೊರೆಯುತ್ತದೆ ಎಂಬುದನ್ನು ಇಂದು ಮತದಾರರು ಆಲೋಚನೆ ಮಾಡಬೇಕಿದೆ ಎಂದರು.
ಸಭೆಯಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿರಾಜ್ಕುಮಾರ್, ಜಿ.ಪಂ.ಸದಸ್ಯೆ ಲೋಹಿತಾ ಬಾಯಿ,ತಿರುಮಲಾಪುರ ಗ್ರಾ.ಪಂ.ಅಧ್ಯಕ್ಷೆ ರಾಜಮ್ಮ, ಜಿ.ಪಂ.ಮಾಜಿ ಸದಸ್ಯೆ ಲಕ್ಷ್ಮಿಅಂದಾನಪ್ಪ, ಮುಖಂಡರಾದ ಚಿಕ್ಕಬಿದರೆ ಚಂದ್ರಣ್ಣ, ಕೆಂಕೆರೆ ಶಿವಕುಮಾರ್, ಬಡ್ಡಿಪುಟ್ಟಣ್ಣ ಸೇರಿದಂತೆ ಕಾರ್ಯಕರ್ತರು ಇದ್ದರು.