ವೈ.ಕೆ.ರಾಮಯ್ಯ ಹೆಸರು ದುರುಪಯೋಗ ಸಲ್ಲ
ಕ.ಪ್ರ. ವಾರ್ತೆ ಕುಣಿಗಲ್ ಏ.10
ಮಾಜಿ ಸಚಿವ ದಿ. ವೈ.ಕೆ.ರಾಮಯ್ಯ ಅವರ ಹೆಸರನ್ನು, ಅಭಿಮಾನಿಗಳಾಗಲಿ, ಇತರೆ ಯಾರೇ ಆಗಲಿ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವುದು ಬೇಡ ಎಂದು ಅನಸೂಯಮ್ಮ ವೈ.ಕೆ.ಆರ್
ತಿಳಿಸಿದ್ದಾರೆ.
ಬುಧವಾರ ಈ ಸಂಬಂಧ ಪಟ್ಟಣಗ ಕುವೆಂಪುನಗರದ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೈ.ಕೆ.ರಾಮಯ್ಯಸದಾ ಅಭಿವೃದ್ಧಿ ಪರ ಚಿಂತನೆ ಮಾಡುತ್ತಾ, ಜನಪರ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರು.
ಅವರು ಬದ್ಧತೆಯಿಂದ ಶ್ರಮಿಸಿದ ಫಲವಾಗಿಯೇ ತಾಲೂಕಿನಲ್ಲಿ ಇಂದು ಹಲವು ಮಹತ್ತರ ಕಾರ್ಯಗಳು ನಡೆದಿವೆ. ಈ ನಿಟ್ಟಿನಲ್ಲಿ ಆಈ ಧೀಮಂತ ರಾಜಕಾರಣಿಯ ಹೆಸರನ್ನು ಕೆಲವರು ಸ್ವಾರ್ಥಪರ ರಾಜಕೀಯಕ್ಕೆ ಬಳಸಿಕೊಳ್ಳುವುದರಲ್ಲಿ ಅರ್ಥವಿಲ್ಲ. ಮಾತ್ರವಲ್ಲ, ಅಂತಹವರಿಗೆ ಅದು ಶೋಭೆ ತರುವುದೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು,
ಪ್ರಸಕ್ತ ವಿಧಾನಸಭೆ ಚುನಾವಣೆಯಲ್ಲಿ ತಾವೂ ಜೆಡಿಎಸ್ ಟಿಕೆಟ್ ಪ್ರಬಲ ಅಕಾಂಕ್ಷಿಯಾಗಿದ್ದು, ಈ ನಿಟ್ಟಿನಲ್ಲಿ ಕುಮಾರಸ್ವಾಮಿ, ದೇವೇಗೌಡರೊಂದಿಗೆ ಸಂಪರ್ಕದಲ್ಲಿದ್ದು, ಹಲವು ಬಾರಿ ಭೇಟಿ ಅಗಿರುವುದಾಗಿ ತಿಳಿಸಿದ ಅವರು, ದೇವೇಗೌಡರು, ಒಟ್ಟಾರೆ ಮಹಿಳೆಯರಿಗೆ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಟಿಕೆಟ್ ನೀಡಲು ಉತ್ಸುಕರಾಗಿದ್ದು, ತಮಗೆ ಟಿಕೆಟ್ ನೀಡುವ ಭರವಸೆ ಇದೆ ಎಂದು ಇದೆ ಸಂದರ್ಭದಲ್ಲಿ ತಿಳಿಸಿದರು.
ಜೆಡಿಎಸ್ ಗೆಲವಿಗೆ ಶ್ರಮ: ತಾವು ಜೆಡಿಎಸ್ ಸೇರ್ಪಡೆಗೊಂಡ ನಂತರ ಪಕ್ಷ ಗ್ರಾಪಂ, ತಾಪಂ ಹಾಗೂ ಜಿಪಂ ಚುನಾವಣೆಗಳಲ್ಲಿ ಉತ್ತಮ ಸಾಧನೆ ಮಾಡಿ ಮೊದಲ ಸ್ಥಾನಕ್ಕೆ ಏರಿದೆ. ಒಂದು ವೇಳೆ ಪಕ್ಷ ಬೇರೊಬ್ಬರಿಗೆ ಟಿಕೆಟ್ ನೀಡಿದ್ದೇ ಆದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿ ಅವರ ಗೆಲವಿಗೆ ಹಗಲಿರುಳು ಶ್ರಮಿಸುತ್ತೇನೆ. ಈ ನಿಟ್ಟಿನಲ್ಲಿ ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಮುಖ್ಯಮಂತ್ರಿಯನ್ನಾಗಿಸುವ ದಿಸೆಯಲ್ಲಿ ತಾವು ಹಾಗೂ ತಮ್ಮ ಬೆಂಬಲಿಗರು ಶ್ರಮಿಸುವುದಾಗಿ ತಿಳಿಸಿದರು.
ಜಿಪಂ ಸದಸ್ಯ ವೈ.ಎಚ್.ಹುಚ್ಚಯ್ಯ,ಮುಖಂಡರಾದ ಮಹೇಶ,ರಾಮಕೃಷ್ಣ, ಶಿವು, ಚಂದ್ರು, ತಮ್ಮಯ್ಯಣ್ಣ,ರಾಜೇಶ ಮತ್ತಿತರರು ಉಪಸ್ಥಿತರಿದ್ದರು.