ಸುದ್ದಿ ಸಂಕ್ಷೇಪ
16ರಂದು ಸೇನಾ ನೇಮಕಾತಿ ರ್ಯಾಲಿ ಆರಂಭ
ರಾಮನಗರ: ಮಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಸೇನಾ ನೇಮಕಾತಿ ರ್ಯಾಲಿಯು ಚಿಕ್ಕಮಗಳೂರಿನ ಜ್ಯೋತಿ ನಗರದಲ್ಲಿನ ಸೆಂಟಿನರಿ ಸ್ಟೇಡಿಯಂನಲ್ಲಿ ಏ.16ರಂದು ನಡೆಯಲಿದೆ. ಬೆಂಗಳೂರು ನಗರ, ಗ್ರಾಮಾಂತರ, ಕೋಲಾರ, ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ ಭಾಗವಹಿಸಬಹುದು. ಮಾಹಿತಿಗೆ ದೂ 080-25006569 ಸಂಪರ್ಕಿಸಿ.
ಪಿರಮಿಡ್ವ್ಯಾಲಿಯ ದಶಮಾನೋತ್ಸವ
ಕ.ಪ್ರ. ವಾರ್ತೆ ಕನಕಪುರ ಏ.10
ಕನಕಪುರ ತಾಲೂಕು ಕೆಬ್ಬೆದೊಡ್ಡಿ ಗ್ರಾಮದಲ್ಲಿರುವ ಅಂತಾರಾಷ್ಟ್ರೀಯ ಖ್ಯಾತಿಯ ಧ್ಯಾನಕೇಂದ್ರ ಪಿರಮಿಡ್ವ್ಯಾಲಿಯ ದಶಮಾನೋತ್ಸವ ಸಮಾರಂಭವನ್ನು ಸಂಸ್ಥಾಪಕ ಬ್ರಹ್ಮರ್ಷಿ ಸುಭಾಷ್ಪತ್ರೀಜಿ ಪಿರಮಿಡ್ ಆಕೃತಿಯ ಕೇಕ್ ಕತ್ತರಿಸುವ ಮೂಲಕ ನೆರವೇರಿಸಿದರು. ಏ.1ರಿಂದ ಬುದ್ಧಪೂರ್ಣಿಮೆವರೆಗೆ ಪ್ರತಿ ವಾರ ವಿವಿಧ ಆಧ್ಯಾತ್ಮಿಕ ಧ್ಯಾನ ಕಾರ್ಯಕ್ರಮಗಳ ಮೂಲಕ ದಶಮಾನೋತ್ಸವವನ್ನು ವಿಭಿನ್ನವಾಗಿ ಆಚರಿಸುವುದಾಗಿ ಪತ್ರೀಜಿ ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಪಿರಮಿಡ್ ಧ್ಯಾನಿಗಳಿಗೆ ವಿವಿಧ ರೀತಿಯ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಪಿರಮಿಡ್ವ್ಯಾಲಿಯ ಸ್ಥಾಪನೆಗಾಗಿ ದುಡಿದವರನ್ನು ಗುರುತಿಸಿ ಸನ್ಮಾನಿಸಲಾಯಿತು. ಪಿರಮಿಡ್ ಟ್ರಸ್ಟ್ನ ಉಪಾಧ್ಯಕ್ಷ ಶ್ರೇಯಾಂಶ್ ಢಾಗಾ, ಧರ್ಮದರ್ಶಿಗಳಾದ ಪಾಲ್ವಿಜಯ ಕುಮಾರ್, ಶಿವರಾಮಪ್ಪ, ಪಿಎಸ್ಆರ್ಕೆ ಪ್ರಸಾದ್, ವ್ಯವಸ್ಥಾಪಕ ಧರ್ಮದರ್ಶಿ ಚಂದ್ರಶೇಖರ್, ಲಲಿತಾಸುಬ್ರಹ್ಮಣ್ಯಂ, ಗಿರಿಜಾ ರಾಜನ್, ವ್ಯವಸ್ಥಾಪಕ ಕೆ.ಆರ್.ನಾಗರಾಜ್ ಪಾಲ್ಗೊಂಡಿದ್ದರು.
ಸ್ಥಳೀಯ ಅಧಿಕಾರಿಗಳ ವರ್ಗಾವಣೆಗೆ ಆಗ್ರಹ
ದೊಡ್ಡಬಳ್ಳಾಪುರ: ಚುನಾವಣಾ ನೀತಿ ಸಂಹಿತೆ ನಿಯಮದಂತೆ ಸ್ಥಳೀಯವಾಗಿ ಸ್ವಂತ ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು. ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಸ್. ತಿಮ್ಮೇಗೌಡ ಸ್ಥಳೀಯ ಮಧುರೆ ಹೋಬಳಿಯ ಹೊನ್ನಾದೇವಿಪುರದವರಾಗಿದ್ದು, ಕೂಡಲೇ ಅವರನ್ನು ವರ್ಗಾವಣೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕರವೇ ಅಧ್ಯಕ್ಷ ಬಿ.ಎಸ್. ಚಂದ್ರಶೇಖರ್, ರಾಜ್ಯ ವಿಧಾನಸಭಾ ಚುನಾವಣೆ ವೇಳೆ ಶಿಕ್ಷಕರ ಮೇಲೆ ಅವರು ಪ್ರಭಾವ ಬೀರುವ ಸಾಧ್ಯತೆ ಇದೆ. ಹೀಗಾಗಿ ಅವರನ್ನು ತಾಲೂಕಿನಿಂದ ವರ್ಗಾವಣೆ ಮಾಡಬೇಕು ಎಂದು ಚುನಾವಣಾಧಿಕಾರಿಗಳಿಗೆ ಕೋರಿದ್ದಾರೆ.
ಇಂದು ಹಾಸ್ಯ-ಲಾಸ್ಯ
ದೊಡ್ಡಬಳ್ಳಾಪುರ: ಇಲ್ಲಿನ ಮಿತ್ರ ಬಳಗದ ನೇತೃತ್ವದಲ್ಲಿ ಪ್ರತಿವರ್ಷದಂತೆ ಯುಗಾದಿ ಹಬ್ಬದ ವಿಶೇಷ ಹಾಸ್ಯ-ಲಾಸ್ಯ ಕಾರ್ಯಕ್ರಮ ಇಲ್ಲಿನ ಎಂಎಬಿಎಲ್ ಶಾಲೆಯ ಆವರಣದಲ್ಲಿ ನಡೆಯಲಿದೆ. ಏ.11ರ ಗುರುವಾರ ಸಂಜೆ 6 ಗಂಟೆಗೆ ಕಾರ್ಯಕ್ರಮ ನಡೆಯಲಿದೆ.