ಅಂಬರೀಷ್ ವಿರುದ್ಧ ಸಮರ್ಥ ಅಭ್ಯರ್ಥಿಗೆ ತಿಣುಕಾಟ
ಕನ್ನಡಪ್ರಭ ವಾರ್ತೆ , ಮಂಡ್ಯ , ಏ.12
ವಿಧಾನಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಅಂಬರೀಷ್ ವಿರುದ್ಧ ಪ್ರಬಲ ಪೈಪೋಟಿ ನೀಡಬಲ್ಲ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಕುರಿತಂತೆ ಜೆಡಿಎಸ್ ಮತ್ತು ಕಾಂಗ್ರೆಸ್‌ನ ಅತೃಪ್ತರ ಗುಂಪುಗಳು ರಹಸ್ಯ ಸಭೆ ಸೇರಿ ಚರ್ಚೆ ನಡೆಸಿವೆ.
ನಗರದ ಖಾಸಗಿ ಕಾಲೇಜಿನಲ್ಲಿ ಬೆಳಗ್ಗೆ ಸಭೆ ಸೇರಿದ ಜೆಡಿಎಸ್ ಮತ್ತು ಕಾಂಗ್ರೆಸ್ಸಿನ ಅತೃಪ್ತರು, ಜೆಡಿಎಸ್ ವರಿಷ್ಠರು, ಅಂಬರೀಷ್ ವಿರುದ್ಧ ಯಾರನ್ನು ಕಣಕ್ಕಿಳಿಸುತ್ತದೆ ಎಂಬುದನ್ನು ಕಾದು ನೋಡಿ ಭಾನುವಾರ ಮತ್ತೊಮ್ಮೆ ಸಭೆ ಸೇರಿ ಅಂತಿಮ ನಿರ್ಧಾರ ಕೈಗೊಳ್ಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಅಂಬರೀಷ್ ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಖಚಿತವಾಗುತ್ತಿದ್ದಂತೆ ಕಾಂಗ್ರೆಸ್ಸಿನೊಳಗೆ ಕೆಲ ಅತೃಪ್ತರ ಅಸಮಾಧಾನ ವ್ಯಕ್ತಪಡಿಸಿದ್ದರು. ಆದರೆ, ವರಿಷ್ಠರ ನಿರ್ಧಾರದಿಂದಾಗಿ ಎಲ್ಲಾ ಅತೃಪ್ತರು ಮೌನ ವಹಿಸಿದ್ದರು.
ಕಾಂಗ್ರೆಸ್ ಟಿಕೆಟ್ ಕೈತಪ್ಪಿರುವುದರಿಂದ ಮಾಜಿ ಸಚಿವ ಆತ್ಮಾನಂದ, ವರಿಷ್ಠರ ವಿರುದ್ಧ ಮುನಿಸಿಕೊಂಡಿದ್ದಾರೆ. ಟಿಕೆಟ್‌ಗಾಗಿ ನಡೆಸಿದ ಸಕಲ ಪ್ರಯತ್ನಗಳು ವಿಫಲವಾದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್- ಜೆಡಿಎಸ್‌ನ ಅತೃಪ್ತರು ನಡೆಸಿರುವ ಸಭೆಯ ಹಿಂದಿನ ಸೂತ್ರಧಾರಿ ಆತ್ಮಾನಂದ ಅವರೇ ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಮಧ್ಯೆ ಜೆಡಿಎಸ್ ವರಿಷ್ಠರು ಇನ್ನೂ ತನ್ನ ಪಕ್ಷದ ಅಭ್ಯರ್ಥಿಯನ್ನು ಅಂತಿಮಗೊಳಿಸದಿರುವುದು. ಜತೆಗೆ ಅಂಬರೀಷ್ ಅವರೊಂದಿಗೆ ಒಳಒಪ್ಪಂದ ಮಾಡಿಕೊಂಡಿದ್ದಾರೆ ಎಂಬ ಊಹಾಪೋಹಗಳು ಕ್ಷೇತ್ರದಲ್ಲಿ ಹರಿದಾಡುತ್ತಿದೆ.
ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಲು ಹಾಲಿ ಶಾಸಕ ಎಂ.ಶ್ರೀನಿವಾಸ್, ಮಾಜಿ ಶಾಸಕ ಜಿ.ಬಿ.ಶಿವಕುಮಾರ್, ಹಿರಿಯ ಮುಖಂಡ ಚಂದಗಾಲು ಶಿವಣ್ಣ, ಯುವ ಮುಖಂಡರಾದ ಅಶೋಕ್ ಜಯರಾಂ, ಗಣಿಗ ರವಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ ಒಲವು ತೋರಿದ್ದಾರೆ.
ಆಕಾಂಕ್ಷಿತರ ಪಟ್ಟಿ ಉದ್ದವಾಗಿರುವುದರಿಂದ ಜೆಡಿಎಸ್ ವರಿಷ್ಠರು, ಅಂಬರೀಷ್ ವಿರುದ್ಧ ಯಾರು ಸೂಕ್ತ ಅಭ್ಯರ್ಥಿ ಎಂಬುದರ ಹುಡುಕಾಟದಲ್ಲಿದ್ದಾರೆ. ಹೀಗಿರುವಾಗಲೇ ಉಭಯ ಪಕ್ಷಗಳ ಅತೃಪ್ತರು ರಹಸ್ಯ ಸಭೆ ಸೇರಿರುವುದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ವರಿಷ್ಠರು ಸ್ಥಳೀಯರಾದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಅವರಿಗೆ ಟಿಕೆಟ್ ನೀಡದೆ, ಅಂಬರೀಷ್ ಹೆಸರನ್ನು ಅಂತಿಮಗೊಳಿಸಿರುವುದು. ಇನ್ನು ಅಂಬರೀಷ್ ಪಕ್ಷದ ನಿಷ್ಠಾವಂತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂಬುದು ಕಾಂಗ್ರೆಸ್‌ನೊಳಗಿರುವ ಅತೃಪ್ತರ ಅಸಮಾಧಾನಕ್ಕೆ ಕಾರಣ.
ಅಂಬರೀಷ್ ಗೆಲವಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಜೆಡಿಎಸ್ ತನ್ನ ಪಕ್ಷದ ಅಭ್ಯರ್ಥಿಯನ್ನು ಈವರೆಗೂ ಘೋಷಣೆ ಮಾಡಿಲ್ಲ. ಅಲ್ಲದೆ ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಗಳಿವೆ ಎಂಬುದು ಜೆಡಿಎಸ್‌ನಲ್ಲಿನ ಅತೃಪ್ತರ ಆರೋಪ.
ಹಾಗೊಂದು ವೇಳೆ ಜೆಡಿಎಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸದಿದ್ದ ಪಕ್ಷದಲ್ಲಿ ಕಾಂಗ್ರೆಸ್- ಜೆಡಿಎಸ್‌ನ ಅತೃಪ್ತರು, ಚಂದಗಾಲು ಶಿವಣ್ಣ, ಮೀರಾ ಶಿವಲಿಂಗಯ್ಯ ಹಾಗೂ ಸತ್ಯಾನಂದ ಅವರಲ್ಲಿ ಒಬ್ಬರನ್ನು ಬಂಡಾಯ ಅಭ್ಯರ್ಥಿಯನ್ನಾಗಿ ಒಮ್ಮತದ ನಿರ್ಧಾರದೊಂದಿಗೆ ಕಣಕ್ಕಿಳಿಸಿ ಅವರ ಗೆಲವಿಗೆ ಶ್ರಮಿಸಲು ನಿರ್ಧರಿಸಿದ್ದಾರೆ.
ಅಲ್ಲದೆ ಅತೃಪ್ತರು, ಸಾಹಿತಿಗಳು, ಬುದ್ಧಿಜೀವಿಗಳು ಹಾಗೂ ಸಂಘಟನೆಗಳ ನಾಯಕರನ್ನು ಒಳಗೊಂಡಂತೆ ಕಾಂಗ್ರೆಸ್- ಜೆಡಿಎಸ್ ಸಮಾನ ಮನಸ್ಕರ ಒಕ್ಕೂಟ ರಚನೆ ಮಾಡುವ ಕುರಿತು ಸಭೆಯಲ್ಲಿ ಚರ್ಚೆಗಳು ನಡೆದಿವೆ. ಭಾನುವಾರದೊಳಗೆ ಜೆಡಿಎಸ್ ತನ್ನ ಪಕ್ಷದ ಅಭ್ಯರ್ಥಿಯನ್ನು ಘೋಷಣೆ ಮಾಡದಿದ್ದರೆ ಒಕ್ಕೂಟವನ್ನು ರಚಿಸಿಕೊಂಡು ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಅತೃಪ್ತರ ಗುಂಪು ನಿರ್ಧಾರ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.