'ಬದುಕನ್ನು ಬೇವು-ಬೆಲ್ಲದಂತೆ ಸ್ವೀಕರಿಸಬೇಕು'
ಕ.ಪ್ರ. ವಾರ್ತೆ , ತುಮಕೂರು , ಏ.12
ಹಬ್ಬಗಳು ಮನುಷ್ಯ ಸಂಬಂಧಗಳ ನಿರಂತರತೆಗೆ ಸಹಕಾರಿ. ಯುಗಾದಿ ಭಾರತೀಯರ ಪಾಲಿಗೆ ಪ್ರಮುಖ ಹಬ್ಬ. ಬದುಕಿನ ಸಿಹಿ-ಕಹಿಗಳನ್ನು ಬೇವು ಬೆಲ್ಲದಂತೆ ಸಮವಾಗಿ ಸ್ವೀಕರಿಸುವ ಸಮಚಿತ್ತತೆ ನಮ್ಮದಾಗಬೇಕೆಂದು ತುಮಕೂರಿನ ನವ ಕರ್ನಾಟಕ ಸೌಹಾರ್ದ ಸಹಕಾರಿ ಸಂಘದ ಮುಖ್ಯ ವ್ಯವಸ್ಥಾಪಕ ಎಸ್.ಸಿದ್ದವೀರಯ್ಯ ಅಭಿಪ್ರಾಯಪಟ್ಟರು.
ಅವರು ನಗರದ ಶೈನಾ ಬಳಗದಿಂದ ಏರ್ಪಡಿಸಿದ್ದ 'ಸೌಹಾರ್ದ ಯುಗಾದಿ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಾವೆಲ್ಲಾ ಪರಸ್ಪರ ಅಪರಿಚಿತರಾಗುತ್ತಿರುವ ಹೊತ್ತಿನಲ್ಲಿ ಶೈನಾ ಬಳಗ ಕಳೆದ ನಾಲ್ಕು ವರ್ಷಗಳಿಂದ ಸೌಹಾರ್ದತೆ ಸಾಧ್ಯತೆಗೆ ಆಚರಿಸುತ್ತಿರುವ ಈ ಸೌಹಾರ್ದ ಯುಗಾದಿ ಅರ್ಥಪೂರ್ಣ ಮತ್ತು ಅಭಿನಂದನೀಯ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕಿ ಬಿ.ಸಿ. ಶೈಲಾ ನಾಗರಾಜ್ ಮಾತನಾಡಿ, ಪ್ರೀತಿಯ ಗುರುತಿಸುವಿಕೆ ಯುಗಾದಿ ಆಶಯವಾಗಬೇಕು. ಋಣಗಳನ್ನು ನೆನಪಿಟ್ಟುಕೊಂಡು ಮಾತ್ರವಲ್ಲ, ಸಂಬಂಧ ಗೌರವಿಸುವಂತಹ ಅಂತಃಕರಣ ನಮ್ಮದಾಗಬೇಕು ಎಂದು ಪ್ರತಿಪಾದಿಸಿದರು.
ಹಮ್ಮು ಬಿಮ್ಮುಗಳಿಲ್ಲದೆ, ದೀನ, ದುರ್ಬಲರಿಗೆ ಬೆಲ್ಲ ಸಕ್ಕರೆಯಾಗುವ ನಿಲುವು ಸಂಬಂಧಗಳನ್ನು ಕಾಪಿಡುತ್ತದೆ. ಪರಸ್ಪರರ ಸಂಕಟ-ಸಂಭ್ರಮಗಳಿಗೆ ಸ್ಪಂದಿಸುತ್ತ ಮಾನವೀಯತೆ ಹರಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿಜಯನಾಮ ಸಂವತ್ಸರ ಮಾನವಕುಲವನ್ನು ಮತ್ತೆ ಮತ್ತೆ ಮನುಷ್ಯರನ್ನಾಗಿಸಲಿ ಎಂದು ಆಶಿಸಿದರು.
ರಂಗ ಹೊದೇಕಲ್ ಮಾತನಾಡಿ, ಕಳೆದ ನಾಲ್ಕು ವರ್ಷಗಳಿಂದ ಶೈನಾ ಬಳಗ ಸೌಹರ್ದ ಯುಗಾದಿ ಆಚರಣೆ ಮೂಲಕ ಮುಸ್ಲಿಂ, ಕ್ರಿಶ್ಚಿಯನ್ ಬಾಂಧವರಿಗೆ ಹೋಳಿಗೆ ಊಟ ಹಂಚುವ ಮೂಲಕ ಸೌಹಾರ್ದತೆ ಸಾರುತ್ತಿದೆ ಎಂದರು.
ವೃತ್ತಿಕಾ ಸಂಚಾಲಕಿ ಉಷಾರಾಣಿ, ಗಂಗ ಸಿದ್ಧವೀರಯ್ಯ ಮತ್ತಿತರರು ಮಾತನಾಡಿದರು. ಸೌಹಾರ್ದ ಯುಗಾದಿ ಪ್ರಯುಕ್ತ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಬಾಂಧವರಿಗೆ ಶೈನಾ ಬಳಗದ ವತಿಯಿಂದ ಹೋಳಿಗೆ ಊಟದ ವ್ಯವಸ್ಥೆ ಮಾಡಲಾಗಿತ್ತು. ದೊಂಬರನಹಳ್ಳಿ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.