ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಕುಷ್ಟರೋಗದ ಬಗ್ಗೆ ಜಾಗೃತಿ ಮೂಡಿಸಿ: ಆರೋಗ್ಯಾಧಿಕಾರಿ

Mainashree
Updated On : 13 Apr 2013, 11:30 am

ಚಿಕ್ಕನಾಯಕನಹಳ್ಳಿ: ಕುಷ್ಟರೋಗ ಸಾಂಕ್ರಾಮಿಕ ರೋಗವಾಗಿದ್ದು, ಈ ಬಗ್ಗೆ ಜನಜಾಗೃತಿ ಅತ್ಯಗತ್ಯವಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಹೇಳಿಕೆ ನೀಡಿರುವ ಅವರು ತಿಳಿಬಿಳಿ ತಾಮ್ರ ಬಣ್ಣದ, ಕಡಿತ ಮತ್ತು ನವೆ ಇಲ್ಲದ ಮಚ್ಚೆಗಳೇ ಕುಷ್ಟರೋಗದ ಲಕ್ಷಣಗಳು. ಇದು ಮೈಕೋ ಬ್ಯಾಕ್ಟೀರಿಯಾ ಲೆಪ್ರೆ ಎಂಬ ರೋಗಾಣುವಿನಿಂದ  ಬರುತ್ತದೆ.ಇದು ಪೂರ್ವಜನ್ಮದ ಪಾಪಕರ್ಮದಿಂದ ಮತ್ತು ವಂಶಪಾರಂಪರ್ಯವಾಗಿ ಬರುತ್ತದೆ ಎಂಬ ಮೂಢನಂಬಿಕೆಯನ್ನು ದೂರಮಾಡಿ ರೋಗದ ಲಕ್ಷಣ ಕಂಡ ತಕ್ಷಣ ಚಿಕೆತ್ಸೆಗೆ ಮುಂದಾಗಿ.
ಜನ್ಮತಃ ಯಾರು ಕುಷ್ಟರೋಗಿಗಳಾಗಿ ಹುಟ್ಟುವುದಿಲ್ಲ. ಇದು ಅಂಟುರೋಗವಲ್ಲದಿದ್ದರು ಕುಷ್ಟರೋಗಿಯ ಮಲ, ಕಫ, ಉಗುಳು ಮೂಲಕ ಗಾಳಿಯಲ್ಲಿ ಹೊರಬಂದು ಆರೋಗ್ಯವಂತ  ಮನುಷ್ಯನ ದೇಹವನ್ನು ಪ್ರವೇಶಿಸುತ್ತವೆ.
ಆತನ ದೇಹ ರೋಗ ನಿರೋಧಕ  ಶಕ್ತಿಯನ್ನು ಕಳೆದುಕೊಂಡ ನಂತರ ರೋಗದ ಲಕ್ಷಣಗಳು ಗೋಚರವಾಗುತ್ತವೆ. ಕುಷ್ಟರೋಗಿಗಳ ಒಟ್ಟು ಸಂಖ್ಯೆಯಲ್ಲಿ ಶೇ. 20ರಷ್ಟು ಜನಮಾತ್ರ ಈ ರೋಗವನ್ನು ಇತರರಿಗೆ ಹರಡಬಲ್ಲರು.
ರೋಗದ ಲಕ್ಷಣಗಳು ಹೆಚ್ಚಾಗಿ ಕತ್ತಿನ ಸುತ್ತ, ಮೊಳಕೈ ಹಿಂಭಾಗದಲ್ಲಿ ನರಗಳ ಊತ ಮತ್ತು ನೋವು ಕಾಣಿಸಿಕೊಳ್ಳಬಹುದು.ಕೈಕಾಲುಗಳು ಸ್ಪರ್ಶ ಜ್ಞಾನವಿಲ್ಲದೆ ಮರಗಟ್ಟಿದಂತ ಅನುಭವವಾಗಬಹುದು. ಆದರೆ ಇಷ್ಟಕ್ಕೇ ಈ ರೋಗದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಸರ್ಕಾರ ಕುಷ್ಟರೋಗವನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ  ಎಲ್ಲಾ ಪ್ರಾಥಮಿಕ  ಆರೋಗ್ಯಕೇಂದ್ರಗಳಲ್ಲಿ ಮತ್ತು ತಾಲೂಕು ಮಟ್ಟದ  ಆಸ್ಪತ್ರೆಗಳಲ್ಲಿ, ಆಯ್ದ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯುತ್ತದೆ ಹಾಗೂ ಎರಡು ವಿಧದಲ್ಲಿ ಔಷಧ ನೀಡಲಾಗುವುದು. ರೋಗದ ತೀವ್ರತೆಯ ಆಧಾರದ ಮೇಲೆ 6 ತಿಂಗಳಿಂದ 1 ವರ್ಷದವರಗೆ ಉಚಿತ ಚಿಕಿತ್ಸೆ ನೀಡಲಾಗುವುದು.
ಸಮಾಜದ ಪಾತ್ರ: ಕುಷ್ಟರೋಗ ನಿವಾರಣೆಯಲ್ಲಿ ಸಮಾಜದ ಪಾತ್ರ ಬಹುಮುಖ್ಯ. ಇದು ಇಲಾಖಾ ಕಾರ್ಯಕ್ರಮವಾಗದೆ, ಸಾರ್ವಜನಿಕ ಕಾರ್ಯಕ್ರಮವಾದಾಗ ಮಾತ್ರ ಇದರ ನಿರ್ಮೂಲನೆ ಸಾಧ್ಯ. ರೋಗದ ಬಗ್ಗೆ ನೆರೆಹೊರೆಯವರಲ್ಲಿ ಅರಿವು ಮೂಡಿಸಬೇಕು.
ರೋಗದ ಗುಟ್ಟು ರಟ್ಟಾಗುವುದೆಂಬ ಭಯದಿಂದ ಚಿಕಿತ್ಸೆಗೆ ಸಹಕರಿಸದ ರೋಗಿಯನ್ನು ಮನವೊಲಿಸಿ ಚಿಕಿತ್ಸೆಗೆ ಪ್ರೇರೇಪಿಸಬೇಕು. ಪಟ್ಟಣ ಮತ್ತು ಗ್ರಾಮಗಳ ಜನರು ತಮ್ಮ ಗ್ರಾಮದಿಂದ ಈ ರೋಗವನ್ನು ನಿರ್ಮೂಲನೆ ಮಾಡುವ ಪಣತೊಡಬೇಕು.
ನಿಮ್ಮ ನೆರೆಹೊರೆಯವರಲ್ಲಿ ಯಾರಿಗಾದರೂ ಕಂದು ಬಣ್ಣದ ಮಚ್ಚೆ ಕಂಡುಬಂದಲ್ಲಿ ತಕ್ಷಣ ವೈದ್ಯರಲ್ಲಿ ಪರೀಕ್ಷಿಸಿಕೊಳ್ಳಲು ಸೂಚಿಸಬೇಕು. ಕುಷ್ಟರೋಗ ಮುಕ್ತ ಭಾರತಕ್ಕಾಗಿ ಎಲ್ಲರು ಕೈಜೋಡಿಸೋಣ ಎಂದು ಅವರು ಕರೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement