ಸಿದ್ಧರಾಮ ಪುರಾಣ ಭಕ್ತಿಕಾವ್ಯ: ಸಿದ್ಧರಾಮಯ್ಯ
ತುಮಕೂರು: ಜಯದೇವಿ ತಾಯಿ ಲಿಗಾಡೆಯವರ ಸಿದ್ಧರಾಮ ಪುರಾಣ ಭಕ್ತಿಕಾವ್ಯ ಎಂದು ಕನ್ನಡ ಉಪನ್ಯಾಸಕ ವಿದ್ವಾನ್ ಎಂ.ಜಿ. ಸಿದ್ಧರಾಮಯ್ಯ ಪ್ರಶಂಸಿಸಿದರು. ಅವರು ನಗರದ ಬನಶಂಕರಿಯ ವೀರಭದ್ರೇಶ್ವರ ನಿಲಯದಲ್ಲಿ ನಡೆದ ಜಯದೇವಿ ತಾಯಿ ಲಿಗಾಡೆಯವರ ಬದುಕು-ಬರೆಹ ಸಾಧನೆ ಕುರಿತು ಉಪನ್ಯಾಸ ನೀಡಿದರು. ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜನಿಸಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮರಾಠಿಯಲ್ಲಿ ಅಧ್ಯಯನ ಮಾಡಿ ಕನ್ನಡ-ಮರಾಠಿ ಭಾಷೆಗಳಲ್ಲಿ ಹಲವಾರು ಕೃತಿ ರಚಿಸಿ ಕನ್ನಡದ ತ್ರಿಪದಿ ಛಂದಸ್ಸಿನಲ್ಲಿ ಸಿದ್ಧರಾಮೇಶ್ವರ ಪುರಾಣ ರಚಿಸುವ ಮೂಲಕ ಕನ್ನಡಿಗರ ಕಾವ್ಯಾಸಕ್ತರಲ್ಲಿ ಮನೆ ಮಾತಾದರು ಎಂದರು. ಈ ಕಾವ್ಯ 20ನೇ ಶತಮಾನದ ಕನ್ನಡ ಸಾಹಿತ್ಯ ಚರಿತ್ರೆ ಬಂದ ಆಧುನಿಕ ಪಂಚ ಮಹಾಕಾವ್ಯಗಳಲ್ಲಿ ಒಂದೆನಿಸಿ ಪ್ರಸಿದ್ಧವಾದ ಭಕ್ತಿ ರಸ ಕಾವ್ಯವಾಯಿತು ಎಂದರು.