ಸುದ್ದಿ ಸಂಕ್ಷೇಪ
ಕೆಂಕೆರೆ ಕಾಳಿಕಾಂಬ ದೇವಿ ಜಾತ್ರೆಗೆ ಚಾಲನೆ
ಹುಳಿಯಾರು: ಹೋಬಳಿ ಕೆಂಕೆರೆ ಗ್ರಾಮದ ಗ್ರಾಮದೇವತೆ ಶ್ರೀಕಾಳಿಕಾಂಬದೇವಿ ಜಾತ್ರಾ ಮಹೋತ್ಸವವು ಶನಿವಾರದಂದು ಉಪ್ಪರಿಗಯ್ಯನ ಬಸಯ್ಯನ ಮನೆಯವರಿಂದ ನಡೆದ ಅಗ್ನಿಕೊಂಡಸೇವಾ ಕಾರ್ಯದದೊಂದಿಗೆ ಚಾಲನೆಗೊಂಡಿದ್ದು ಶನಿವಾರದವರೆಗೆ ಎಂಟು ದಿನಗಳ ಕಾಲ ನಡೆಯಲಿದೆ. 14ರ ಭಾನುವಾರ ವೇ.ಚನ್ನಬಸವಯ್ಯ ಮತ್ತು ಮಕ್ಕಳಿಂದ ಅಗ್ನಿಕೊಂಡಸೇವೆ, 15ರರಂದು ಕರೇಸಿದ್ದಯ್ಯನ ಚನ್ನವೀರಮ್ಮ ಮತ್ತು ಮಕ್ಕಳಿಂದ ಅಗ್ನಿಕೊಂಡಸೇವೆ ಕಾರ್ಯ, 16ರ ರಂದು ದಮ್ಮಡಿಹಟ್ಟಿ ಹಾಗೂ ಕಂಪನಹಳ್ಳಿ ಗ್ರಾಮಸ್ಥರಿಂದ ಅಮ್ಮನವರ ಕಂಕಣ ಧಾರಣೆ, ಮದುವಣಗಿತ್ತಿ ಸೇವೆ, ಆರತಿಬಾನ ಕಾರ್ಯ ಹಾಗೂ ಅದೇ ದಿನ ರಾತ್ರಿ ಗೌಡಗೆರೆ ಶ್ರೀದುರ್ಗಮ್ಮದೇವಿ, ದಮ್ಮಡಿಹಟ್ಟಿ ಈರಬೊಮ್ಮಕ್ಕದೇವಿ, ಹುಳಿಯಾರು ದುರ್ಗಮ್ಮದೇವಿಯವರ ಆಗಮನದೊಂದಿಗೆ ಕೂಡುಭೇಟಿ ನಡೆಯಲಿದೆ.17ರಂದು ಬೆಳಿಗ್ಗೆ ಮಡಲಕ್ಕಿಸೇವೆ ರಾತ್ರಿ ಕೆ.ಬಿ.ರಮೇಶಣ್ಣ ಹಾಗೂ ಅಂಗಡಿಕೊಡಪ್ಪ ಮತ್ತು ಗ್ರಾಮಸ್ಥರಿಂದ ಅಮ್ಮನವರ ಉಯ್ಯಾಲೆ ಉತ್ಸವ ನಡೆಯಲಿದೆ. 18ರಂದು ಬೆಳಿಗ್ಗೆ ಕಲಶ ಮಹೋತ್ಸವ, ರಾತ್ರಿ ಬರದಲೇಪಾಳ್ಯದ ಅಂಬಿಕಾ ಕೃಪಾಪೋಷಿತ ನಾಟಕ ಮಂಡಳಿಯವರಿಂದ ದೇವಿಮಹಾತ್ಮೆ ನಾಟಕ ಪ್ರದರ್ಶನ, ಶುಕ್ರವಾರ ಸಿಡಿ ಕಾರ್ಯಕ್ರಮ, 20ರಂದು ಓಕಳಿ ಭಂಡಾರ ಸೇವೆ ನಡೆಯಲಿದೆ.
ಪಕ್ಷಕ್ಕೆ ದ್ರೋಹ ಬಗೆದವರಿಗೆ ತಕ್ಕ ಶಾಸ್ತಿ
ಚಿಕ್ಕನಾಯಕನಹಳ್ಳಿ: ತಮ್ಮ ರಾಜಕೀಯ ಜೀವನದಲ್ಲಿ ಪಕ್ಷದ ವತಿಯಿಂದ ಎಲ್ಲಾ ಅಧಿಕಾರವನ್ನು ಅನುಭವಿಸಿ ಕಷ್ಟದ ದಿನಗಳಲ್ಲಿ ಪಕ್ಷವನ್ನು ತೊರೆದವರಿಗೆ ಮತದಾರ ಚುನಾವಣೆಯಲ್ಲಿ ತಕ್ಕ ಪಾಠಕಲಿಸುತ್ತಾರೆ ಎಂದು ಜೆಡಿಯು ಪಕ್ಷದ ಅಭ್ಯರ್ಥಿ ಪ್ರಕಾಶ್ ಯಾದವ್ ಟೀಕಿಸಿದರು. ಅವರು ಜೆಡಿಯು ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ನಂತರ ಶನಿವಾರ ಸುದ್ದಿಗಾರೊಂದಿಗೆ ಮಾತನಾಡುತ್ತಾ, ಜೆ.ಸಿ.ಮಾಧುಸ್ವಾಮಿಯವರು ಜೆಡಿಯು ಪಕ್ಷದಿಂದ ಸಕಲ ಸುಖವನ್ನು ಅನುಭವಿಸಿ ಈಗ ತತ್ವಸಿದ್ಧಾಂತವನ್ನು ಬಿಟ್ಟು ಪಕ್ಷತೊರೆದು ತಮ್ಮ ನೈತಿಕ ದಿವಾಳಿತನವನ್ನು ಪ್ರದರ್ಶಿಸಿದ್ದಾರೆ. ಪ್ರಾಮಾಣಿಕ, ದಕ್ಷ ಎಂದೆಲ್ಲಾ ತಮ್ಮನ್ನು ತಾವೇ ಬಿಂಬಿಸಿಕೊಳ್ಳುವ ಮಾಧುಸ್ವಾಮಿಯವರು, ದಿ. ರಾಮಕೃಷ್ಣ ಹೆಗಡೆಯವರ ಆದರ್ಶವನ್ನು ಬಿಟ್ಟಿರುವುದು ಅಧಿಕಾರ ಲಾಲಸೆಯ ದಿವಾಳಿತನ ಎಂದು ಮೂದಲಿಸಿದರು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾನು ಅನಿವಾರ್ಯವಾಗಿ ಈ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿದೆ. ನನಗೆ ರಾಜಕೀಯ ಆಕಾಂಕ್ಷೆಗಳೇನು ಇಲ್ಲ. ಪಕ್ಷದ ಗೌರವ ಎತ್ತಿ ಹಿಡಿಯಲು ಸ್ಪರ್ಧಿಸುತ್ತಿದ್ದೇನೆ. ನಾನು ಜೀವನದಲ್ಲಿ ಹೋರಾಟದಿಂದ ಬೆಳೆದು ಬಂದವನು. ಜನತೆ ನನಗೆ ಅಧಿಕಾರ ನೀಡಿದ್ದೇ ಆದಲ್ಲಿ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ಹೋರಾಟ ಮಾಡುತ್ತೇನೆ. ರಾಜ್ಯದ ಎರಡನೇ ಬಳ್ಳಾರಿ ಎಂದು ಕುಖ್ಯಾತಿ ಪಡೆದ ಚಿ.ನಾ.ಹಳಲ್ಳಿಯಲ್ಲಿ ಅಕ್ರಮ ಗಣಿಗಾರಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ನಾನು ಕೈಜೋಡಿಸುತ್ತೇನೆ ಎಂದರು.