ಕಾಂಗ್ರೆಸ್ ಪಾಳೆಯದಲ್ಲಿ ಬಿರುಸಿನ ಚಟುವಟಿಕೆ
ಕುಣಿಗಲ್: ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದ ರವಿಕಿರಣ್ ಪಕ್ಷದ ಟಿಕೆಟ್ ವಂಚಿತರಾಗಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ತಾಲೂಕಿನ ಕೈ ಪಾಳೆಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆದಿದ್ದರೆ, ಬಿ ಫಾರಂ ಘೋಷಣೆಯಲ್ಲಿ ಇನ್ನೂ ತಡಮಾಡುವ ತಂತ್ರ ಅನುಸರಿಸುತ್ತಿರುವ ಜೆಡಿಎಸ್ ಹೈಕಮಾಂಡ್ ಧೋರಣೆಗೆ ಕಾರ್ಯಕರ್ತರು ರೋಸಿಹೋಗಿದ್ದಾರೆ.
ಕೈಪಾಳೆಯಕ್ಕೆ ಸೆಡ್ಡು ಹೊಡೆಯುವ ನಿಟ್ಟಿನಲ್ಲಿ ಕೈ- ಟಿಕೆಟ್ ಅಕಾಂಕ್ಷಿ ರವಿಕಿರಣ್ ಶುಕ್ರವಾರ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ, ಶನಿವಾರ ತಾಲೂಕು ಕಾಂಗ್ರೆಸ್ ಕಾರ್ಯಾಲಯವಾದ ನಮ್ಮ ಮನೆಯಲ್ಲಿ ಬಿರುಸಿನ ಚಟುವಟಿಕೆಗೆ ಎಡೆಮಾಡಿಕೊಟ್ಟಿತು. ಕಾರ್ಯಕರ್ತರ ಸಮಾವೇಶವನ್ನು ಶಾಸಕರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ತಕ್ಕ ಪಾಠ ಕಲಿಸಿ: ಸಮಾವೇಶದಲ್ಲಿ ತಾಲೂಕಿನ ವಿವಿಧೆಡೆಯಿಂದ ನೂರಾರು ಕಾರ್ಯಕರ್ತರು ಆಗಮಿಸಿ ಪಾಲ್ಗೊಂಡು ಕೈಪಾಳೆಯ ಕೈಬಲಪಡಿಸಲು ತಮ್ಮದೆ ತಂತ್ರ ನಡೆಸುವ ನಿಟ್ಟಿನಲ್ಲಿ ಹಲವು ಅಭಿಪ್ರಾಯ ಮಂಡಿಸಿದರು. ಶಾಸಕ ಬಿ.ಬಿ.ರಾಮಸ್ವಾಮಿಗೌಡ (ಕಾಂಗ್ರೆಸ್) ಪಾಳೆಯದ ಒಗ್ಗಟ್ಟನ್ನು ಹಣಬಲದ ಮೂಲಕ ಛಿದ್ರ ಮಾಡಲು ಕೆಲವರು ಯತ್ನಿಸುತ್ತಿದ್ದು, ಇಂತ ಅಲ್ಪಮತಿಗಳಿಗೆ, ಕಾರ್ಯಕರ್ತರು ಒಗ್ಗಟ್ಟಾಗಿ ಶ್ರಮಿಸಿ, ಅವರಿಗೆ ತಕ್ಕಪಾಠ ಕಲಿಸುವಂತೆ ಕರೆ ನೀಡಿದರು.
ತಮ್ಮ ಅಧಿಕಾರವಧಿಯಲ್ಲಿ ಮಾಡಿರುವ ಸಾಧನೆಗಳ ಪಟ್ಟಿಯನ್ನು ಕಾರ್ಯಕರ್ತರ ಮುಂದಿಟ್ಟು, ವಿರೋಧ ಪಕ್ಷದ ಶಾಸಕನಾದರೂ ತಮ್ಮ ಅಭಿವೃದ್ಧಿ ಸಾಧನೆ ಕಳಪೆಯಾಗಿಲ್ಲ ಎಂದು ಮನವರಿಕೆ ಮಾಡಿ, ಮತದಾರರಲ್ಲೂ ಮನವರಿಕೆ ಮಾಡಿಕೊಟ್ಟು, ರಾಜ್ಯದಲ್ಲಿ ಈ ಬಾರಿ ಕಾಂಗ್ರೆಸ್ ಚುಕ್ಕಾಣಿ ಹಿಡಿಯಯುವಂತೆ ಮಾಡಿ ಎಂದರು.
ಇದೇ 15ರಂದು ತಾವು ನಾಮಪತ್ರ ಸಲ್ಲಿಸಲಿದ್ದು, ತಾಲೂಕಿನ ಎಲ್ಲಾ ಮೂಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸುವಂತೆ ಮನವಿ ಮಾಡಿದರು.
ರುದ್ರಯ್ಯ ನಾಮಪತ್ರ?: ಈ ಮಧ್ಯೆ ಕಾಂಗ್ರೆಸ್ ಟಿಕೆಟ್ಗೆ ಲಾಬಿ ನಡೆಸಿದ್ದ ಡಾ.ರುದ್ರಯ್ಯ ಸಹ ಸೋಮವಾರ ಪಕ್ಷೇತರರಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆಗಳು ದಟ್ಟವಾಗಿದ್ದರೆ, ಜೆಡಿಎಸ್ ಪಾಳೆಯದಲ್ಲಿ ಟಿಕೆಟ್ ಆಕಾಂಕ್ಷಿಯಾಗಿದ್ದ ಕಸಾಬ ಹೋಬಳಿ ಜಿಪಂ ಸದಸ್ಯೆ ಸುಮಿತ್ರಮ್ಮನವರ ಪತಿ ಗುತ್ತಿಗೆದಾರ ಕುಲುಮೆಪಾಳ್ಯ ಶಿವಣ್ಣ ಪಕ್ಷೇತರರಾಗಿ ಸೋಮವಾರ ಕಣಕ್ಕಿಳಿಯುವುದಾಗಿ ಘೋಷಿಸಿದ್ದಾರೆ. ಇದರಿಂದ ಜೆಡಿಎಸ್ ಪಾಳೆಯದಲ್ಲಿ ತಲ್ಲಣ ಉಂಟು ಮಾಡಿದೆ.
ಇದರೊಂದಿಗೆ ಪಕ್ಷದ ಬಿ ಫಾರಂ ಮಾಜಿ ಸಚಿವ ಡಿ.ನಾಗರಾಜಯ್ಯನವರಿಗೋ, ಮಾಜಿ ಶಾಸಕ ಎಸ್.ಪಿ. ಮುದ್ದಹನುಮೇಗೌಡರಿಗೋ ಎಂದು ಪಕ್ಷದ ಹೈಕಮಾಂಡ್ ಇನ್ನೂ ಅಧಿಕೃತ ಘೋಷಣೆ ಮಾಡದೆ ತಡಮಾಡುವ ತಂತ್ರಕ್ಕೆ ಮೊರೆ ಹೋಗಿರುವುದು ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಸಂಜೆ ವೇಳೆಗೆ ಮಾಜಿ ಶಾಸಕ ಎಸ್.ಪಿ.ಮುದ್ದಹನುಮೇಗೌಡರಿಗೆ ಬಿ ಫಾರಂ ದೊರೆಯಲಿದ್ದು ಅವರೆ ಸೋಮವಾರ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುತ್ತಾರೆಂಬ ವದಂತಿ ಹಬ್ಬಿದ್ದರೆ, ಮಾಜಿ ಸಚಿವರ ಬೆಂಬಲಿಗರು ಈ ವದಂತಿಗಳನ್ನು ತಳ್ಳಿಹಾಕಿದ್ದಾರೆ.
ಆದರೆ ಇಬ್ಬರು ಮುಖಂಡರು ಸೋಮವಾರ ತಮ್ಮ ಉಮೇದುವಾರಿಕೆಗೆ ನಾಮಪತ್ರ ಸಲ್ಲಿಸುವುದಾಗಿ ಘೋಷಿಸಿದ್ದು, ಸೋಮವಾರ ನಾಮಪತ್ರ ಸಲ್ಲಿಕೆಯ ಭರಾಟೆ ಜೋರಾಗುವ ಸಾಧ್ಯತೆ ಇದ್ದು, ತಾಲೂಕು ಕಚೇರಿಯಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗೆ ಸಿಪಿಐ ಧರ್ಮೇಂದ್ರ, ಪಿಎಸೈಗಳಾದ ಗುರುಪ್ರಸಾದ್ ಸಿಬ್ಬಂದಿ ಎಲ್ಲಾ ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದ್ದಾರೆ.