ಕುಡುಕರ ತಾಣ ತಿಪಟೂರು ಕೆರೆ ಅಂಗಳ ಪಾರ್ಕ್
ತಿಪಟೂರು: ತಿಪಟೂರು ಕೆರೆಯ ಅಂಗಳದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಪಾರ್ಕ್ನಲ್ಲಿ ರಾತ್ರಿ ಹೊತ್ತು ಕುಡುಕರ ಕಾಟ, ಹಾವಳಿ ಜಾಸ್ತಿಯಾಗಿದ್ದು, ಹಳೇಪಾಳ್ಯ ರಸ್ತೆಯ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.
ಈ ಬಗ್ಗೆ ನಗರಸಭೆ, ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸರ್ಕಾರವು ಕೋಟ್ಯಂತರ ರು. ವೆಚ್ಚ ಮಾಡಿ ಪಾರ್ಕ್ನ್ನು ನಿರ್ಮಿಸಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಮಾಡಿದೆ.
ಆದರೆ ಈ ಪಾರ್ಕ್ನಲ್ಲಿ ಸಂಜೆಯಾಗುತ್ತಿದಂತೆ ಕುಡುಕರು ಅಲ್ಲೇ ಹತ್ತಿರದಲ್ಲಿರುವ ಮದ್ಯದಂಗಡಿಯಿಂದ ಮದ್ಯವನ್ನು ತಂದು ಕುಡಿದ ನಂತರ ಮದ್ಯದ ಬಾಟಲಿಗಳನ್ನು ಅಲ್ಲಿಯೇ ಪುಡಿ ಮಾಡಿ ಬೀಸಾಡುತ್ತಾರೆ.
ಜೊತೆಗೆ ಕೆರೆಯೊಳಕ್ಕೆ ಬಾಟಲಿಗಳನ್ನು ಎಸೆಯುವುದರಿಂದ ನೀರು ಮಲೀನವಾಗುತ್ತಿದೆ. ಹಳೇಪಾಳ್ಯದ ರಸ್ತೆಗೆ ಹೊಂದಿಕೊಂಡಂತಿರುವ ಈ ಪಾರ್ಕ್ನ ಪಕ್ಕದಲ್ಲೇ ಹಳೇಪಾಳ್ಯಕ್ಕೆ ಹೋಗಬೇಕಾಗಿರುವುದರಿಂದ ರಾತ್ರಿ ಹೊತ್ತು ಮಹಿಳೆಯರು, ವೃದ್ಧರು ಹಾಗೂ ವಿದ್ಯಾರ್ಥಿಗಳು ಓಡಾಡುವುದು ತುಂಬಾ ಕಷ್ಟವಾಗಿದೆ. ಕೆರೆಯ ಅಕ್ಕಪಕ್ಕದ ತೋಟದಲ್ಲಿ ರೈತರು ಬೆಳೆದಿರುವಂತಹ ಬೆಳೆಯ ಮೇಲೂ ಕುಡುಕರ ಹಾವಳಿ ಜಾಸ್ತಿಯಾಗಿದೆ. ಇದರಿಂದಾಗಿ ತುಂಬಾ ತೊಂದರೆಯುಂಟಾಗುತ್ತಿದೆ.
ಆದ್ದರಿಂದ ನಗರಸಭೆ ಈ ಬಗ್ಗೆ ಸೂಕ್ತ ಕ್ರಮಕೈಗೊಂಡು ಕುಡುಕರ ಹಾವಳಿಯನ್ನು ತಪ್ಪಿಸಿ ಸಾರ್ವಜನಿಕರಿಗೆ ಹಾಗೂ ಪ್ರಯಾಣಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.