ಡಿಎಸ್‌ಎಸ್ ಸತ್ತು ವರ್ಷಗಳೇ ಆಗಿವೆ: ಬಾನಂದೂರು
ಕನ್ನಡಪ್ರಭ ವಾರ್ತೆ ತುಮಕೂರು ಏ.14
ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಸತ್ತು ಬಹಳ ವರ್ಷಗಳೇ ಆಗಿವೆ. ತಿಥಿಯೂ ಆಗಿ ಹೋಗಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಡಾ. ಬಾನಂದೂರು ಕೆಂಪಯ್ಯ ವಿಷಾದಿಸಿದರು.
ತುಮಕೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಘಟಕ ಭಾನುವಾರ ಆಯೋಜಿಸಿದ್ದ ಭಾರತರತ್ನ ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್‌ರಾಂ ಅವರ ಜನ್ಮದಿನಾಚರಣೆ, ಡಾ. ಅಂಬೇಡ್ಕರ್ ಅವರ ಪುತ್ಥಳಿ ಅನಾವರಣ ಹಾಗೂ ಮ್ಯೂಸಿಯಂ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಡಿಎಸ್‌ಎಸ್ ಸ್ಥಾಪನೆಯ ವೇಳೆ ಇದ್ದ ಆಶಯಗಳು ಪ್ರೀತಿ, ಸೌಹಾರ್ದತೆ, ಮಾನವೀಯತೆ ಇವೆಲ್ಲವೂ ಇಂದು ಬೆಲೆ ಕಳೆದುಕೊಂಡು ಮಾಯವಾಗಿವೆ. ಹೊಲೆಯ- ಮಾದಿಗ ಎಂಬ ಒಳಪಂಗಡಗಳ ಜಗಳ ಪರಾಕಾಷ್ಠೆ ಮುಟ್ಟಿದ್ದು ದಲಿತರ ಒಗ್ಗಟ್ಟಿಗೆ ಸಂಚಕಾರ ತಂದಿದೆ ಎಂದರು.
ಸಂಘರ್ಷ: ರಾಜಕೀಯ ಉದ್ದೇಶಗಳಿಗಾಗಿ ಈಚಿನ ದಿನಗಳಲ್ಲಿ ದಲಿತರ ಜಾತಿ-ಒಳಜಾತಿಗಳಲ್ಲಿ ಸಂಘರ್ಷ ನಡೆಯುತ್ತಿದೆ. ಇದು ನಿಮ್ನ ವರ್ಗಗಳ ಸಬಲೀಕರಣದ ಕನಸು ಕಂಡಿದ್ದ ಡಾ. ಬಿ. ಆರ್. ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾದ ಪ್ರಕ್ರಿಯೆ ಎಂದು ಬಾನಂದೂರು ಕೆಂಪಯ್ಯ ಕಳವಳ ವ್ಯಕ್ತಪಡಿಸಿದರು.
ಜಾತಿ, ಧರ್ಮ ಇಂದಿಗೂ ರಾಜ್ಯವನ್ನು ಆಳುತ್ತಿದೆ. ರಾಜಕಾರಣಿಗಳು ಡಿಎಸ್‌ಎಸ್ ಅನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಸಂಘಟನೆಯನ್ನು ಒಡೆದಿದ್ದಾರೆ ಎಂದು ವಿಷಾದಿಸಿದರು. ಅಸ್ಪೃಶ್ಯತೆ ಆಚರಣೆ ಇಂದಿಗೂ ಬಹಳಷ್ಟು ಕಡೆ ಇದೆ. ಅಂಬೇಡ್ಕರ್ ಅವರನ್ನು ಕೇವಲ ಪೂಜೆಗೆ ಸೀಮಿತಗೊಳಿಸಿ ಅಂಬೇಡ್ಕರ್ ವಿಚಾರಧಾರೆಗೆ ತಿಲಾಂಜಲಿ ನೀಡಲಾಗಿದೆ. ಇತ್ತೀಚಿನ ಪೀಳಿಗೆಗೆ ಅಂಬೇಡ್ಕರ್ ಬಗ್ಗೆ ಅರಿವೇ ಇಲ್ಲ. ದಲಿತರು ತಮ್ಮ ಮಹಾನ್ ನಾಯಕ ಅಂಬೇಡ್ಕರ್ ಆಶಯದಂತೆ ಒಗ್ಗಟ್ಟಾಗಿ ಹೋರಾಡುವ ಬದಲು ಸಂಘಟನೆಗಳ ನಡುವೆ ಹರಿದುಹಂಚಿ ಹೋಗುತ್ತಿದ್ದಾರೆ ಎಂದರು.
ಕುತಂತ್ರ: ಒಡೆದು ಆಳುವುದು ರಾಜಕೀಯ ಕುತಂತ್ರ. ದಲಿತರು ಇದನ್ನು ಅರ್ಥ ಮಾಡಿಕೊಳ್ಳದೆ ಒಳಜಗಳಗಳಲ್ಲಿ ಕಳೆದುಹೋಗುತ್ತಿದ್ದಾರೆ. ಈ ದೌರ್ಬಲ್ಯವನ್ನೇ ಕೆಲವರು ತಮ್ಮ ಆಯುಧವನ್ನಾಗಿ ಮಾಡಿಕೊಂಡಿರುವುದರಿಂದ ಅಂಬೇಡ್ಕರ್ ಅವರ ಪ್ರತಿಮೆಗಳಿಗೆ ಪದೇಪದೇ ಅವಮಾನವೆಸಗುವ ಕೃತ್ಯಗಳು ನಡೆಯುತ್ತಲೇ ಇವೆ ಎಂದರು.
ಶ್ಲಾಘನೆ: ಅಂಬೇಡ್ಕರ್ ಅವರ ಜೀವನ ಹಾಗೂ ಸಾಧನೆಯ ವಿವಿಧ ಘಟ್ಟಗಳನ್ನು ಪರಿಚಯಿಸುವ ಮ್ಯೂಸಿಯಂ ಅನ್ನು ಸ್ಥಾಪಿಸಿ, ಅವರ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ತುಮಕೂರು ವಿಶ್ವವಿದ್ಯಾನಿಲಯ ಅಂಬೇಡ್ಕರ್ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಿದೆ. ಭಾರತದ ಬೇರೆ ಯಾವುದೇ ವಿಶ್ವವಿದ್ಯಾನಿಲಯದಲ್ಲಿ ಅಂಬೇಡ್ಕರ್ ಅವರಿಗಾಗೇ ಪ್ರತ್ಯೇಕ ಮ್ಯೂಸಿಯಂನ್ನು ತೆರೆದ ಉದಾಹರಣೆಗಳಿಲ ಎಂದು ಶ್ಲಾಘಿಸಿದರು.
ಅಂಬೇಡ್ಕರರ ಹೋರಾಟದ ಬದುಕೇ ತಮಗೆ ಸ್ಫೂರ್ತಿ ನೀಡಿತು ಎಂದರು. ಡಾ. ಅಂಬೇಡ್ಕರ್ ಎಳೆದ ಕ್ರಾಂತಿಯ ರಥವನ್ನು ಮುಂದೆ ತೆಗೆದುಕೊಂಡು ಹೋಗಬೇಕೇ ಹೊರತು ಮತ್ತೆ ಹಿಂದಕ್ಕೆ ಎಳೆಯುವ ಕೆಲಸ ಮಾಡಬಾರದು ಎಂದು ವಿನಂತಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತುಮಕೂರು ವಿ. ವಿ. ಕುಲಪತಿ ಪ್ರೊ. ಎಸ್. ಸಿ. ಶರ್ಮಾ ಅವರು, ಅಂಬೇಡ್ಕರ್ ಹೆಸರಿನ ಪೀಠವನ್ನು ಸ್ಥಾಪಿಸಿ ಸಂಶೋಧನೆ ಹಾಗೂ ಉನ್ನತ ಅಧ್ಯಯನಕ್ಕೆ ಅವಕಾಶ ಮಾಡಿಕೊಡುವ ಉದ್ದೇಶ ವಿಶ್ವವಿದ್ಯಾನಿಲಯಕ್ಕಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ನಿಧಿಗಾಗಿ ಯುಜಿಸಿಯನ್ನು ಸಂಪರ್ಕಿಸಲಾಗುವುದು ಎಂದರು.
ಕುಲಸಚಿವ (ಪರೀಕ್ಷಾಂಗ) ಎನ್. ಲಕ್ಷ್ಮೀಕಾಂತ ವಂದಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಬಿ. ರಮೇಶ್ ಉಪಸ್ಥಿತರಿದ್ದರು. ಸಹಪ್ರಾಧ್ಯಾಪಕ ಡಾ. ಬಸವರಾಜು ಪ್ರಾರ್ಥಿಸಿದರು. ಪತ್ರಿಕೋದ್ಯಮ ಸಹಾಯಕ ಪ್ರಾಧ್ಯಾಪಕ ಸಿಬಂತಿ ಪದ್ಮನಾಭ ನಿರೂಪಿಸಿದರು.