ಪುರಸಭಾಡಳಿತದಿಂದ ಅಂಬೇಡ್ಕರ್ ಜಯಂತಿ
ಕ.ಪ್ರ.ವಾರ್ತೆ ಕುಣಿಗಲ್ ಏ.14
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 122ನೇ ಜನ್ಮ ದಿನಾಚರಣೆಯನ್ನು ಪುರಸಭಾಡಳಿತ ಹಾಗೂ ತಾಲೂಕು ಆಡಳಿತ ವಿವಿಧೆಡೆಯಲ್ಲಿ ಆಚರಿಸಿತು.
ಪಟ್ಟಣದ 17ನೇ ವಾರ್ಡ್ನಲ್ಲಿ ಪಾಳುಬಿದಿದ್ದ ಅಂಬೇಡ್ಕರ್ ಭವನವನ್ನು ಪುರಸಭಾಡಳಿತದ ವತಿಯಿಂದ ನವೀಕೃತಗೊಳಿಸಿ, ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಡಿವೈಎಸ್ಪಿ ಉಮಾರಾಣಿ, ಸಿಪಿಐ ಧಮೇಂದ್ರ, ಪಿಎಸೈ ಗುರುಪ್ರಸಾದ್, ತಾಲೂಕು ಸಮಾಜಕಲ್ಯಾಣಾಧಿಕಾರಿ ಜಯಪ್ರಕಾಶ್, ನರೇಗ ಸಹಾಯಕ ನಿರ್ದೇಶಕ ಬೆಟ್ಟಸ್ವಾಮಿಗೌಡ ಹಾಗೂ ಮುಖ್ಯಾಧಿಕಾರಿ ಶುಭಾ ಪುಷ್ಪನಮನ ಸಲ್ಲಿಸುವ ಮೂಲಕ ಕಾರ್ಯಕ್ರಮ ನಡೆಯಿತು.
ಪುರಸಭಾ ಅಭಿಯಂತರರಾದ ನರಸೇಗೌಡ, ಶಿಲ್ಪ, ಶ್ರೀಕಾಂತ್, ಸಿಬ್ಬಂದಿಗಳಾದ ರಮೇಶ್, ರಫೀಕ್, ಪ್ರೇಮ ಸೇರಿದಂತೆ ಪೌರಕಾರ್ಮಿಕರು ಉಪಸ್ಥಿತರಿದ್ದು, ಪೌರಕಾರ್ಮಿಕರ ಮಗಳಾದ ಐಶ್ವರ್ಯ, ಮಹಾನ್ ಮಾನವತವಾದಿ ಅಂಬೇಡ್ಕರ್ರವರ ಬಗ್ಗೆ ವಾಚನ ಮಾಡಿದ್ದು ವಿಶೇಷವಾಗಿತ್ತು.
ಚುನಾವಣೆ ನೀತಿಸಂಹಿತೆ ಅಂಗವಾಗಿ ತಾಲೂಕು ಆಡಳಿತ, ತಾಲೂಕು ಸಮಾಜ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಕಂದಾಯ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಸರಳವಾಗಿ ಆಚರಿಸಲಾಯಿತು. ತಹಸೀಲ್ದಾರ್ ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿ, ತಾಪಂ ಇಒ ಡಾ.ರಾಮಚಂದ್ರಪ್ಪ, ಸಿಪಿಐ ಧಮೇಂದ್ರ, ತಾಲೂಕು ಸಮಾಜಕಲ್ಯಾಣಾಧಿಕಾರಿ ಜಯಪ್ರಕಾಶ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.
ತಾಪಂ ಇಒ ಡಾ.ರಾಮಚಂದ್ರಪ್ಪ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ವ್ಯವಸ್ಥೆಯಡಿ ಇಂದು ದೇಶದ ಎಲ್ಲಾ ನಾಗರಿಕರು ಒಂದೇ ಎಂಬ ಮನೋಭಾವ ಮೂಡಿದೆ. ಎಲ್ಲರಿಗೂ ಸಮಬಾಳ್ವೆ, ಸಮಬಾಳು, ಸಮಪಾಲು ಇದು ಅಂಬೇಡ್ಕರ್ ಅವರ ಕನಸಾಗಿದ್ದು, ಅವರು ಕೇವಲ ಒಂದು ವರ್ಗ ಅಥವಾ ಸಮುದಾಯಕ್ಕೆ ಸೀಮಿತವಾಗದೆ, ಮನುಕುಲದ ಸಮಗ್ರ ಏಳಿಗೆಗೆ ಶ್ರಮಿಸಿದ ಮಹಾನ್ಚೇತನ ಎಂದರು.