ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸುದ್ದಿ ಸಂಕ್ಷೇಪ

Mainashree
Updated On : 14 Apr 2013, 11:27 am

ಬಿಜೆಪಿ ಸೇರಲಾರೆ: ಹೆಬ್ಬಾಕ ರವಿಶಂಕರ್
ಕ.ಪ್ರ. ವಾರ್ತೆ  ತುಮಕೂರು  ಏ.14

ಕೆಜೆಪಿ ತೊರೆದು ಬಿಜೆಪಿ ಸೇರಲಾರೆ ಎಂದು ಜಿಪಂ ಸದಸ್ಯ ಹಾಗೂ ಕೆಜೆಪಿ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಸ್ಪಷ್ಟಪಡಿಸಿದ್ದಾರೆ. ಅವರು ಈ ಕುರಿತು ಹೇಳಿಕೆ ನೀಡಿದ್ದು, ಸುದ್ದಿಗೋಷ್ಠಿಯಲ್ಲಿ ಸಾಗರನಹಳ್ಳಿ ನಟರಾಜ್ ಹೇಳಿರುವ ಹೇಳಿಕೆ ವೈಯಕ್ತಿಕ, ಬಿಜೆಪಿ ತೊರೆದು ಕೆಜೆಪಿ ಸೇರಿದ್ದಾಗಿದೆ. ಮತ್ತೆ ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ತಮ್ಮನ್ನು ನಂಬಿ ಯಡಿಯೂರಪ್ಪನವರು ಕೆಜೆಪಿ ಹೊಣೆ ಹೊರಿಸಿದ್ದಾರೆ. ಅವರ ನಂಬಿಕೆಗೆ ಯಾವುದೇ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುತ್ತೇನೆ. ಜಿಲ್ಲೆಯಲ್ಲಿ ಕೆಜೆಪಿ ಸದೃಡವಾಗಿದೆ. ಸಾಗರನಹಳ್ಳಿ ನಟರಾಜ್ ಹೇಳಿಕೆಗೂ, ಕೆಜೆಪಿಗೂ ಯಾವುದೇ ಸಂಬಂಧವಿಲ್ಲ. ಕೆಜೆಪಿ ಕಾರ್ಯಕರ್ತರು ಆತಂಕಪಡುವ ಅಗತ್ಯವಿಲ್ಲ ಎಂದು ಹೆಬ್ಬಾಕ ರವಿಶಂಕರ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

'ಕೆಜೆಪಿ ಜಿಲ್ಲಾಧ್ಯಕ್ಷರು ಶೀಘ್ರ ಬಿಜೆಪಿಗೆ'
ತುಮಕೂರು: ತುಮಕೂರು ಜಿಲ್ಲಾ ಕರ್ನಾಟಕ ಜನತಾಪಕ್ಷದ ಅಧ್ಯಕ್ಷ ಹಾಗೂ ಹಾಲಿ ಬಿಜೆಪಿ ಜಿಲ್ಲಾ ಪಂಚಾಯತ್ ಸದಸ್ಯ ಹೆಬ್ಬಾಕ ರವಿಶಂಕರ್ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿಗೆ ಬರಲಿದ್ದಾರೆ ಎಂದು ಸಾಗರನಹಳ್ಳಿ ನಟರಾಜ್ ಭವಿಷ್ಯ ನುಡಿದರು. ಈಗಾಗಲೇ ಬಿಜೆಪಿ ತೊರೆದು ಕೆಜೆಪಿ ಸೇರಿರುವ ಬಹಳಷ್ಟು ಮಂದಿ ಮುಖಂಡರಿಗೆ, ಕಾರ್ಯಕರ್ತರಿಗೆ ಉಸಿರುಗಟ್ಟುವ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ತಾವೇ ಸಾಕ್ಷಿ. ಹೆಬ್ಬಾಕ ರವಿ, ರಂಗನಾಯಕ್ ತರಹದ ಮುಖಂಡರು ಹೇಡಿತನ ತೊರೆದು ಬಿಜೆಪಿಗೆ ಸೇರುವುದು ಒಳಿತು. ತಮಗಾದ ಗತಿ ಅವರಿಗೆ ಆಗುವುದು ಬೇಡ ಎಂದಷ್ಟೇ ಈ ಮಾತುಗಳನ್ನು ಹೇಳುತ್ತಿದ್ದೇನೆ ಎಂದು ನಟರಾಜ್ ತಿಳಿಸಿದರು.

20ಕ್ಕೆ ಡಿಎಸ್‌ಎಸ್ ಚುನಾವಣಾ ಚಿಂತನಾ ಸಭೆ

ತಿಪಟೂರು: ಈ ಬಾರಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕ ದಲಿತ ಸಂರಕ್ಷಣಾ ಸಮಿತಿಯ ತಾಲೂಕು ಪದಾಧಿಕಾರಿಗಳು ಮತ್ತು ಕಾಯಕರ್ತರು ಯಾವ ಪಕ್ಷಕ್ಕೆ ಬೆಂಬಲವನ್ನು ಸೂಚಿಸಬೇಕೆಂಬ ಬಗ್ಗೆ ಚಿಂತನ-ಮಂಥನ ಸಭೆಯನ್ನು ನಗರದ ಹಿಂಡಿಸ್ಕೆರೆ ಗೇಟಿನಲ್ಲಿ ಏ.20ರ ಶನಿವಾರ ಬೆಳಗ್ಗೆ 10ಗಂಟೆಗೆ ಆಯೋಜಿಸಲಾಗಿದೆ ಎಂದು ದ.ಸಂ.ಸ ರಾಜ್ಯಾಧ್ಯಕ್ಷ ಹತ್ಯಾಳ್ ಮೂರ್ತಿ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಚಿಂತನಾ-ಮಂಥನ ಸಭೆಯ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮತಗಳು ಇರುವುದು ಮಾರಾಟಕಲ್ಲ. ನಿಷ್ಠಾವಂತ, ಪ್ರಾಮಾಣಿಕ ಅಭ್ಯರ್ಥಿಗಳಿಗೆ ಮತವನ್ನು ಹಾಕಿ ಅದರ ಮೌಲ್ಯವನ್ನು ಕಾಪಾಡಬೇಕು. ಇದುವರೆಗೂ ಎಲ್ಲ ಪಕ್ಷಗಳೂ ದಲಿತರನ್ನು ಮತಬ್ಯಾಂಕ್‌ಗಳಾಗಿ ನೋಡುತ್ತಿದ್ದಾರೆಂದು ತಿಳಿಸಿದರು.

ಸಾಕಾರಗೊಂಡ 50 ವರ್ಷಗಳ ಕನಸು
ಚಿಕ್ಕನಾಯಕನಹಳ್ಳಿ: ಸರಿಸುಮಾರು 50 ವರ್ಷಗಳಿಂದ ತಾಲೂಕಿನ ಜನ ಕಾಯುತ್ತಿದ್ದ 26 ಕೆರೆಗಳಿಗೆ 102 ಕೋಟಿಯ ಹೇಮಾವತಿ ಕುಡಿಯುವ ನೀರಿನ ಯೋಜನೆ ಕಾಮಗಾರಿ  ತಿಪಟೂರು ತಾಲೂಕು ಬಿಳಿಗೆರೆ ಗ್ರಾಮದ ಸಮೀಪ ಪ್ರಾರಂಭವಾಗಿದೆ. ಇದರಿಂದ ಇದುವರೆಗು ಯೋಜನೆ ಜಾರಿ ಮತ್ತು ಪ್ರಾರಂಭಕ್ಕೆ ಇದ್ದ ಅಡ್ಡಿ ಆತಂಕಗಳೆಲ್ಲಾ ದೂರಾಗಿ ತಾಲೂಕಿನ ಜನತೆ ನಿರಾಳವಾದಂತಾಗಿದೆ. ಕಾಮಗಾರಿಯನ್ನು ಗುತ್ತಿಗೆದಾರರು ಮೂರ್ನಾಲ್ಕು ತಿಂಗಳಲ್ಲಿ ಮುಗಿಸುವ ಇಂಗಿತ ವ್ಯಕ್ತಪಡಿಸಿದ್ದು, ನಾಲೆ ಆಳ ಹೆಚ್ಚಿಗೆ ಇಲ್ಲದಿರುವುದರಿಂದ ಕಾಮಗಾರಿ ತ್ವರಿತವಾಗಿ ಮುಗಿಯುತ್ತದೆ ಎಂದು ಕಾಮಗಾರಿ ಉಸ್ತುವಾರಿಯಲ್ಲಿರುವ ಎಂಜಿನಿಯರು ತಿಳಿಸಿದರು. ಮಾಜಿ ಶಾಸಕ ಕಿರಣ್‌ಕುಮಾರ್ ಈ ಕುರಿತು ತೀವ್ರ ಯತ್ನ ನಡೆಸಿದ್ದನ್ನು ಸ್ಮರಿಸಬಹುದು.

ಜೆಡಿಎಸ್ ವಿರುದ್ಧ ಮತ ಹಾಕಲು ನಿರ್ಧಾರ
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜಾತ್ಯತೀತ ಜನತಾದಳದ ವಿರುದ್ಧ ಮತ ಚಲಾಯಿಸಲು ದಲಿತ ಜಾಗೃತಿ ವೇದಿಕೆ ನಿರ್ಧರಿಸಿದೆ. ತುಮಕೂರು ನಗರದಲ್ಲಿ ಭಾನುವಾರ ಬೆಳಗ್ಗೆ ವೇದಿಕೆ ವತಿಯಿಂದ ಕರೆಯಲಾಗಿದ್ದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿತು. ಹಲವಾರು ವರ್ಷಗಳಿಂದ ದಲಿತರು ಜಾತ್ಯತೀತ ಜನತಾದಳವನ್ನು ನಂಬಿದ್ದರು. ಆದರೆ ಜನಾಂಗಕ್ಕೆ ಬಿ ಫಾರಂ ಹಂಚಿಕೆಯಲ್ಲಿ ದ್ರೋಹ ಮಾಡಿದೆ. ಈ ಹಿನ್ನೆಲೆಯಲ್ಲಿ ಆ ಪಕ್ಷವನ್ನು ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಸುವಂತೆ ತೀರ್ಮಾನ ಕೈಗೊಳ್ಳಲಾಯಿತು. ಜಾತ್ಯತೀತ ಜನತಾದಳ ಹೊರತಾಗಿ ಕಾಂಗ್ರೆಸ್ ಮತ್ತು ಕೆಜೆಪಿ ಪಕ್ಷಗಳು ನಮ್ಮ ಜನಾಂಗದ ಪರವಾಗಿ ಇರುವುದರಿಂದ ಇವರೆಡು ಪಕ್ಷದವರನ್ನು ಬೆಂಬಲಿಸುವಂತೆ ನಿರ್ಧಾರ ಕೈಗೊಳ್ಳಲಾಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ನಗರಸಭೆ ಮಾಜಿ ಸದಸ್ಯ ನರಸೀಯಪ್ಪ ಮಾತನಾಡಿ ಕಳೆದ 30-40 ವರ್ಷಗಳಿಂದ ಜೆಡಿಎಸ್ ಪಕ್ಷಕ್ಕಾಗಿ ದುಡಿದೆ. ಆದರೆ ಆ ಪಕ್ಷದಲ್ಲಿ ದಲಿತರನ್ನು ಕಡೆಗಣಿಸಲಾಯಿತು ಎಂದು ವಿಷಾದಿಸಿದರು. ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ವಿರುದ್ಧವಾಗಿ ಮತ ಚಲಾಯಿಸುವಂತೆ ಕರೆ ನೀಡಿದರು. ಪ್ರತಿಯೊಂದು ದಲಿತ ಕಾಲೋನಿಗಳಿಗೆ  ಭೇಟಿ ನೀಡಿ ಜೆಡಿಎಸ್ ಪಕ್ಷ ಜನಾಂಗಕ್ಕೆ ಮಾಡಿದ ಅನ್ಯಾಯವನ್ನು ಪ್ರಚಾರ ಮಾಡುವುದಾಗಿ ತಿಳಿಸಿದರು. ಸಭೆಯಲ್ಲಿ ಎಪಿಎಂಸಿ ಸದಸ್ಯ ನಾರಾಯಣಮೂರ್ತಿ, ವಕೀಲರಾದ ಗೋವಿಂದರಾಜು, ವೆಂಕಟೇಶ್, ಗಂಗಾಧರ್, ಮುಖಂಡರಾದ ಮೋಹನ್‌ಕುಮಾರ್, ಗಂಗರಾಜು, ಗಂಗಾಧರಯ್ಯ, ಕೆಂಪರಾಜು, ರಾಮಕೃಷ್ಣ, ವೆಂಕಟೇಶಮೂರ್ತಿ, ಚಿಕ್ಕರಂಗಯ್ಯ, ಶ್ರೀರಾಮಯ್ಯ, ಕೃಷ್ಣಪ್ಪ, ಸಿದ್ಧಗಂಗಯ್ಯ, ಯೋಗೀಶ್ ಮುಂತಾದವರು ಇದ್ದರು.

ಜಯಚಂದ್ರರಿಂದ ಕುಲದೇವತೆಗೆ ಪೂಜೆ
ಹುಳಿಯಾರು: ಶಿರಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ದಂಪತಿ ತಮ್ಮ ಕುಲದೇವತೆ ಹುಳಿಯಾರಿನ ಕೆಂಚಮ್ಮನ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಇವರ ಆಗಮನದ ಸುದ್ದಿ ಅರಿತ ವಿವಿಧ ಪಕ್ಷಗಳಿಗೆ ಹರಿದು ಹಂಚುಹೋಗಿರುವ ಜಯಚಂದ್ರ ಅಭಿಮಾನಿಗಳು ಹಾಗೂ ಬೆಂಬಲಿಗರು ಪಕ್ಷಭೇದ ಮರೆತು ದೇವಾಲಯಕ್ಕೆ ಆಗಮಿಸಿ  ಪೂಜಾಕೈಂಕರ್ಯದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ತಾವು ಶಾಸಕರು ಹಾಗೂ ಸಚಿವನಾಗಿದ್ದ ಸಂದರ್ಭದಲ್ಲಿ ಹುಳಿಯಾರಿಗೆ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ನೆನಪಿಸಿಕೊಂಡು ತಾವೂ ಈಗಲೂ ಈ ಭಾಗದ ಜನತೆಯನ್ನು ಮರೆತಿಲ್ಲ ಎಂದರು. ಇದೇ 17ರಂದು ತಾವು ಶಿರಾ  ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮ ಪತ್ರಸಲ್ಲಿಸಲ್ಲಿದ್ದು ತಾಯಿ ಕೆಂಚಮ್ಮನ ಆಶೀರ್ವಾದ ಹಾಗೂ ಅಭಿಮಾನಿಗಳ ಬೆಂಬಲಿದಿಂದ ಗೆಲವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಬಡಗಿ ರಾಮಣ್ಣ, ವೆಂಕಟೇಶ್, ಸಿದ್ದರಾಮಯ್ಯ, ಅಶೋಕ್ ಬಾಬು, ಜಹೀರ್ ಸಾಬ್,  ಜಬಿ ಸಾಬ್, ಬಿ.ವಿ. ಶ್ರೀನಿವಾಸ್, ವೈ.ಆರ್. ಮಲ್ಲಿಕಾರ್ಜುನಯ್ಯ, ಧನುಶ್ ರಂಗನಾಥ್ ಇನ್ನಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement