ಹಕ್ಕು ಗೌರವಿಸದ ಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಿ: ದೊರೈರಾಜು ಕರೆ
ಕನ್ನಡಪ್ರಭ ವಾರ್ತೆ ತುಮಕೂರು ಏ.14
ಸ್ಲಂ ನಿವಾಸಿಗಳನ್ನು, ವಂಚಿತ ಸಮುದಾಯಗಳನ್ನು ಹಾಗೂ ದಲಿತರನ್ನು ನಿರ್ಲಕ್ಷಿಸುವ ನಮ್ಮ ಹಕ್ಕುಗಳನ್ನು ಗೌರವಿಸದ ಜನಪ್ರತಿನಿಧಿಗಳಿಗೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕೆಂದು ಪ್ರಗತಿಪರ ಚಿಂತಕ ಕೆ. ದೊರೈರಾಜು ಕರೆನೀಡಿದರು.
ಅವರು ಡಾ. ಬಿ.ಆರ್. ಅಂಬೇಡ್ಕರ್ 122 ನೇ ಜಯಂತಿ ಮತ್ತು ಬಾಬು ಜಗಜೀವನ್ ರಾಂ ಅವರ 106ನೇ ಜಯಂತಿ ಅಂಗವಾಗಿ ಜಿಲ್ಲಾ ಕೊಳಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿಯಿಂದ ನಗರದ ಮಂಡಿಪೇಟೆಯ ಮಾರಿಯಮ್ಮ ನಗರದಲ್ಲಿ ಸ್ಲಂ ನಿವಾಸಿಗಳ ಪ್ರತಿಜ್ಞೆ ಜಾಗೃತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಕಳೆದ ಹಲವಾರು ವರ್ಷಗಳಿಂದ ಹಣವಂತರು ಮಾತ್ರ ಚುನಾವಣೆಯಲ್ಲಿ ನಿಲ್ಲುವಂತಹ, ಗೆಲ್ಲುವಂತಹ ವಾತಾವರಣ ನಿರ್ಮಾಣವಾಗಿರುವುದನ್ನು ರಾಜ್ಯದಲ್ಲಿರುವ ಸ್ಲಂ ನಿವಾಸಿಗಳು ಗಮನಿಸಬೇಕು. ಸ್ಲಂ ನಿವಾಸಿಗಳ ಮತ್ತು ಬಡವರ ಹಕ್ಕುಗಳನ್ನು ಗೌರವಿಸುವಂತಹ ಅಭ್ಯರ್ಥಿಗಳನ್ನು ನಿಮ್ಮ ಹಕ್ಕು ಚಲಾಯಿಸುವ ಮೂಲಕ ಆಯ್ಕೆ ಮಾಡಬೇಕೆಂದು ಕರೆ ನೀಡಿದರು.
ಪ್ರತಿಜ್ಞೆಯನ್ನು ಬೋಧನೆ: ಪ್ರತಿಜ್ಞಾವಿಧಿ ಬೋಧಿಸಿದ ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ನಮ್ಮನ್ನು ಯಾರು ಮನುಷ್ಯತ್ವದಿಂದ ನೋಡುವುದಿಲ್ಲವೋ ಅಂತವರು ಇಂದು ನಮ್ಮ ಮತಕೇಳಲು ಬರುತ್ತಿದ್ದಾರೆ. ನಾವು ಆಮಿಷಗಳಿಗೆ ಒಳಗಾಗದೇ ಸ್ವಾಭಿಮಾನದಿಂದ ಮತಹಾಕಿ, ನಮ್ಮ ಬದುಕನ್ನು ಹಸನಗೊಳಿಸಬೇಕಿದೆ. ನಾವು ಯಾರು ವೋಟನ್ನು ಮಾರಿಕೊಳ್ಳುವುದಿಲ್ಲವೆಂದು ಪ್ರತಿಜ್ಞೆಯನ್ನು ಬೋಧಿಸಿದರು.
ನಂತರ ರಕ್ತರಹಿತವಾದ ಆರ್ಥಿಕ, ಸಾಮಾಜಿಕ ವ್ಯವಸ್ಥೆ ತಲಪುವುದೇ ಪ್ರಜಾಪ್ರಭುತ್ವವೆನ್ನುವ ಅಂಬೇಡ್ಕರ್ ಆಶಯದಂತೆ ನಾವು ನಡೆದುಕೊಳ್ಳಬೇಕಿದೆ ಎಂದರು.
ವೇದಿಕೆಯಲ್ಲಿ ಪದಾಧಿಕಾರಿಗಳಾದ ಸೈಯದ್ ಅಲ್ತಾಫ್, ಸಿದ್ದಪ್ಪ, ಅಟೇಕಾರ್, ಮುರುಘ, ಜಯಮ್ಮ, ಬಾಬುದಾ, ಶೆಟ್ಟಾಳ್ಳಯ್ಯ, ರಾಮಯ್ಯ, ರಘು, ಅರುಣ, ಗಾಯಿತ್ರಿ, ಕೋಮಲ, ಶೃತಿ, ಲತಾ ಕೆಂಪೇಶ್ವರಿ ಮತ್ತು ನೂರಾರು ಕೊಳಗೇರಿ ನಿವಾಸಿಗಳು ಹಾಜರಿದ್ದರು.